ಪೆಟ್ರೋಲಿಯಂ ವರ್ತಕರ ‘ತೈಲ ಸಮಾಗಮ’ ಉದ್ಘಾಟನೆ

ಉಡುಪಿ, ಫೆ.29: ಪೆಟ್ರೋಲಿಯಂ ವರ್ತಕರ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯಾವುದೇ ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ನಿಮ್ಮ ಜೊತೆ ಇರಲು ಸದಾ ಬದ್ಧವಾಗಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾ ಮಂಡಳದ ಆಶ್ರಯ ದಲ್ಲಿ ದಕ್ಷಿಣ ಕನ್ನಡ- ಉಡುಪಿ ಸಂಘದ ಸಹಯೋಗದಲ್ಲಿ ಉಡುಪಿ ಕರಾವಳಿ ಬೈಪಾಸ್ ಬಳಿಯ ಲಿಗಾಡೋ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ತೈಲ ಸಮಾಗಮವನ್ನು ಶನಿವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ 97 ಸೇರಿದಂತೆ ರಾಜ್ಯದಲ್ಲಿ ಸುಮಾರು 4800ಕ್ಕೂ ಅಧಿಕ ಪೆಟ್ರೋಲ್ ಬಂಕ್‌ಗಳು ಕಾರ್ಯಾಚರಿಸುತ್ತಿದ್ದು, ಸುಮಾರು 50000 ಕುಟುಂಬಗಳು ಈ ಉದ್ದಿಮೆಯನ್ನು ಅವಲಂಬಿಸಿವೆ. ರಾಜ್ಯದಲ್ಲಿ ಪ್ರತಿದಿನ 8500ಲಕ್ಷ ಲೀಟರ್ ಪೆಟ್ರೋಲ್ ಹಾಗೂ 2ಕೋಟಿ ಲೀಟರ್ ಡಿಸೇಲ್ ಮಾರಾಟವಾಗುತ್ತಿದೆ. ಇದರಿಂದ ಸರಕಾರಕ್ಕೆ 15,500ಕೋಟಿ ರೂ. ತೆರಿಗೆ ರೂಪದಲ್ಲಿ ಬರುತ್ತಿದೆ ಎಂದರು.
ಈಗಾಗಲೇ ಬೆಂಗಳೂರಿನಲ್ಲಿ 30 ಜಿಲ್ಲೆಗಳ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಕಾರಣಕ್ಕೂ ಪೆಟ್ರೋಲ್ ಬಂಕ್‌ಗಳ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿಕೊಳ್ಳಬಾರದು ಮತ್ತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದೇನೆ. ಅದೇ ರೀತಿ ವರ್ತಕರು ಕೂಡ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡದೆ ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಬೇಕು ಎಂದು ಅವರು ತಿಳಿಸಿದರು.
ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಒಂದು ಪೆಟ್ರೋಲ್ ಬಂಕ್‌ನಿಂದ ಇನ್ನೊಂದು ಬಂಕ್‌ಗೆ ಮಧ್ಯೆ ಇರುವ ಪರಿಧಿ ಗಳನ್ನು ಮೀರಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಪೈಪೋಟಿ ಉಂಟಾಗಿ ಪೆಟ್ರೋಲಿಯಂ ವರ್ತಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದುದರಿಂದ ಸರಕಾರ ಪರಿಧಿಯೊಳಗೆ ಅನುಮತಿ ನೀಡುವ ಕುರಿತು ಯೋಜನೆಯನ್ನು ರೂಪಿಸಬೇಕೆಂದು ಮನವಿ ಮಾಡಿದರು.
ಇಂದು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸಾಕಷ್ಟು ಕಲಬೆರಕೆಗಳು ನಡೆಯು ತ್ತಿದೆ. ಭ್ರಷ್ಟ ಅಧಿಕಾರಿಗಳು ಪೆಟ್ರೋಲಿಯಂ ವರ್ತಕರಿಗೆ ವಿನಾಕಾರಣ ಕಿರು ಕುಳಗಳನ್ನು ನೀಡುತ್ತಿದ್ದಾರೆ. ಇವುಗಳನ್ನು ನಿಯಂತ್ರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಮತ್ತು ಮಹಾಮಂಡಳ ಯೋಜನೆ ರೂಪಿಸುವ ಕುರಿತು ಚಿಂತನೆ ಮಾಡಬೇು ಎಂದು ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಎಚ್.ಆರ್.ತಿವಾರಿ, ಮಹಾ ಮಂಡಳದ ಉಪಾಧ್ಯಕ್ಷರಾದ ರಾಜದೀಪ್ ಕೌಜಲಗಿ, ಕೆ.ವಿಶ್ವಾಸ್ ಶೆಣೈ, ಅನೀಸ್ ಸನವುಲ್ಲಾ, ಮುಖ್ಯ ಸಂಯೋಜಕ ಸತೀಶ್ ಎನ್.ಕಾಮತ್, ಖಜಾಂಚಿ ವಿಶ್ವನಾಥ ಪಾಟೇಲ್, ಡಿಕೆಯುಪಿಡಿಎ ಅಧ್ಯಕ್ಷ ವಾಮನ ಪೈ, ಕಾರ್ಯದರ್ಶಿ ರಾಜೇಂದ್ರ ಕಟ್ಟೆ ಉಪಸ್ಥಿತರಿದ್ದರು.
ಮಹಾಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆನಂದ ಕಾರ್ನಾಡ್ ವಂದಿಸಿದರು. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ಸಂಗೀತ್ ಬಹಾರ್ ತಂಡದಿಂದ ಸಂಗೀತ ರಸಸಂಜೆ ನಡೆಯಿತು.







