ಮುಸ್ಲಿಮರನ್ನು ಗಲಭೆಕೋರರಿಂದ ರಕ್ಷಿಸಿದ ದಲಿತರು: ಹಿಂಸೆಯ ನಡುವೆಯೂ ಮಾನವೀಯತೆಗೆ ಸಾಕ್ಷಿಯಾದ ದಿಲ್ಲಿ

ಹೊಸದಿಲ್ಲಿ,ಫೆ.29:ಈವರೆಗೆ 40ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಗಲಭೆ ಪೀಡಿತ ಈಶಾನ್ಯ ದಿಲ್ಲಿಯಲ್ಲಿ ವ್ಯಾಪಕ ಹಿಂಸಾತ್ಮಕ ಘಟನೆಗಳ ನಡುವೆಯೂ ಶಾಂತಿ, ಸೌಹಾರ್ದದ ಕೆಲವು ಪ್ರಕರಣಗಳು ವರದಿಯಾಗಿವೆ.
ದಲಿತ ಸಮುದಾಯದ ಹಲವಾರು ಮಂದಿ ತಮ್ಮ ಮುಸ್ಲಿಂ ನೆರೆಹೊರೆಯವರನ್ನು ಗಲಭೆಕೋರರಿಂದ ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಗೋಕುಲ್‌ಪುರಿಯ ಆಸುಪಾಸಿನ ಪ್ರದೇಶಗಳಲ್ಲಿ ಗಲಭೆ ಭುಗಿಲೆದ್ದ ಬೆನ್ನಲ್ಲೇ ಘೋಷಣೆ ಕೂಗುತ್ತಿದ್ದ ದುಷ್ಕರ್ಮಿಗಳ ಗುಂಪೊಂದು ವಝೀರಾಬಾದ್-ಗಾಝಿಯಾಬಾದ್ ರಸ್ತೆಯಲ್ಲಿರುವ ಮುಸ್ಲಿಂ ಸಮಾಧಿಯೊಂದರ ಸಮೀಪದ ಆವರಣಗೋಡೆಯನ್ನು ಒಡೆದುಹಾಕಿತ್ತು.
ಆಗ ಸ್ಥಳೀಯ ಅಮರ್‌ಕಾಲನಿ ನಿವಾಸಿ ದಲಿತ ಯುವಕ ರಾಯ್‌ಚಂದ್ ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಧಾವಿಸಿ ಗಲಭಕೋರರನ್ನು ತಡೆದರು. ಆಗ ಅವರ ನಡುವೆ ಮಾತಿನ ಚಕಮಕಿಯೇರ್ಪಟ್ಟಿತ್ತು. ಆಗ ಅಲ್ಲಿಂದ ನಿರ್ಗಮಿಸಿದ ಗುಂಪು ಪ್ರದೇಶದೊಳಗೆ ನುಗ್ಗಲು ಯತ್ನಿಸಿತು. ಪ್ರಚೋದನಕಾರಿ ಹಾಗೂ ಕೋಮುವಾದಿ ಘೋಷಣೆಗಳನ್ನು ಅವರು ಕೂಗುತ್ತಿದ್ದರು. ಆಗ ಭಯಭೀತರಾದ ಕೆಲವು ಮುಸ್ಲಿಮರು ತಮ್ಮ ಮನೆಯನ್ನು ತೊರೆಯಲಾರಂಭಿಸಿದರು. ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದ ದಲಿತರು ಮುಸ್ಲಿಮರಿಗೆ ರಕ್ಷಣೆಯ ಭರವಸೆ ನೀಡಿದರು. ಆದಾಗ್ಯೂ, ಬಾಡಿಗೆಯ ಮನೆಗಳಲ್ಲಿ ವಾಸಿಸುತ್ತಿದ್ದ ಕೆಲವು ಮುಸ್ಲಿಮರು ಸುರಕ್ಷಿತ ಪ್ರದೇಶಗಳಲ್ಲಿರುವ ತಮ್ಮ ಬಂಧುಗಳ ಮನೆಗೆ ತೆರಳಿದರೆಂದು ಗೋಕುಲ್‌ಚಂದ್ ಹೇಳುತ್ತಾರೆ.
ಇದನ್ನು ಗಮನಿಸಿದ ತಾವು ರಾತ್ರಿಯಿಡೀ ಮುಸ್ಲಿಮರ ನಿವಾಸಗಳ ಬಳಿ ಪಹರೆ ಕಾಯತೊಡಗಿದವು. ಹೊರಗಿನಿಂದ ಬಂದವರನ್ನು ತಾವು ಕಾಲನಿಯಲ್ಲಿರುವ ಗುರುರವಿದಾಸ್ ದೇಗುಲದ ಬಳಿಯೇ ತಡೆದು ನಿಲ್ಲಿಸಿ, ಅಲ್ಲಿಂದ ಮುಂದಕ್ಕೆ ತೆರಳದಂತೆ ಅವರ ಮನವೊಲಿಸಿದೆವು ಎಂದು ಗೋಕುಲ್‌ಚಂದ್ ಹೇಳುತ್ತಾರೆ. ರವಿದಾಸ್ ದೇಗುಲದಲ್ಲಿ ಸಿಸಿಟಿವಿ ಅಳವಡಿಸಿರುವುದು ಕಾಲನಿಯೊಳಗೆ ಅತಿಕ್ರಮ ಪ್ರವೇಶ ಮಾಡಲು ಬಯಸಿದ್ದವರನ್ನು ಹಿಂಜರಿಯುವಂತೆ ಮಾಡಿತ್ತು ಎಂದು ಗೋಕುಲ್‌ಚಂದ್ ಹೇಳುತ್ತಾರೆ.
ಈಶಾನ್ಯ ದಿಲ್ಲಿಯ ಅಂಬೇಡ್ಕರ್ ಬಸ್ತಿಯಲ್ಲಿಯೂ ಮೌಜ್‌ಪುರ್‌ನಲ್ಲಿ ಆನಂದ್ ಬಸ್ತಿ ಪ್ರದೇಶದಲ್ಲಿಯೂ ದಲಿತರು ಮುಸ್ಲಿಮರ ರಕ್ಷಣೆಗೆ ನಿಂತರು. ಈಶಾನ್ಯ ದಿಲ್ಲಿಯ ಎಲ್ಲೆಡೆ ಗಲಭೆ ಭುಗಿಲೆದ್ದರೂ, ದಲಿತರು ಹಾಗೂ ಮುಸ್ಲಿಮರು ಪ್ರಾಬಲ್ಯವಿರುವ ವಿಜಯನಗರ್, ಗುರುದ್ವಾರ ಹಾಗೂ ಶಿವಾನಂದ ಮಂದಿರ್‌ಗಳಲ್ಲಿ ಯಾವುದೇ ಅಹಿತಕರಘಟನೆ ವರದಿಯಾಗಲಿಲ್ಲ. ಗಲಭೆ ಭೀತಿಯ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನು ತೊರೆದುಹೋಗಿದ್ದ ಮುಸ್ಲಿಮರು ತಮ್ಮ ಮನೆಗಳಿಗೆ ಮರಳಲು ಆಗಮಿಸಿದ್ದಾರೆ.
ಹಾಗೆಯೇ ಕರ್ದಾಮ್‌ಪುರಿ, ಬ್ರಹ್ಮಪುರಿ, ಬ್ರಿಜ್‌ಪುರಿ ಹಾಗೂ ಘೌಂಡಾ ಪ್ರದೇಶಗಳು ಕೂಡಾ ಗಲಭೆಯ ಸಂದರ್ಭದಲ್ಲಿ ದಲಿತ-ಮುಸ್ಲಿಂ ಅನ್ಯೋನ್ಯತೆಗೆ ಸಾಕ್ಷಿಯಾದವು.







