ಫಲ್ಗುಣಿ ನದಿಯ ಸೇತುವೆಯಲ್ಲಿ ಕೆಟ್ಟು ನಿಂತ ಬಸ್ : ಸಂಚಾರಕ್ಕೆ ಅಡ್ಡಿ-ಪರದಾಡಿದ ವಾಹನಿಗರು

ಮಂಗಳೂರು, ಫೆ. 29: ಗುರುಪುರದ ಫಲ್ಗುಣಿ ನದಿ ಸೇತುವೆಯ ಮಧ್ಯೆ ಮಂಗಳೂರು-ಮೂಡುಬಿದಿರೆ-ಕಾರ್ಕಳ ರೂಟಿನ ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದರ ಆ್ಯಕ್ಸಿಲ್ ಮತ್ತು ಜಾಯಿಂಟ್ ತುಂಡಾಗಿ ಸೇತುವೆಯ ಮಧ್ಯಭಾಗದಲ್ಲಿ ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿ (169)ಯಲ್ಲಿ ಸುಮಾರು ಒಂದುವರೆ ತಾಸು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಶನಿವಾರ ನಡೆಯಿತು.
ಪರಾರಿ ಕೊಳಕೆಬೈಲಿನ ಮೂಲಕ ಸೇತುವೆ ಪ್ರವೇಶಿಸುತ್ತಲೇ ಬಸ್ಸಿನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬಸ್ ಸೇತುವೆಗೆ ತಾಗಿಕೊಂಡು ಮುಂದೆ ಸಾಗಿದೆ. ಪರಿಣಾಮ, ಬಸ್ಸಿನ ಹಿಂದಿನ ಬಾಗಿಲು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಅಪಾಯವರಿತ ಚಾಲಕ ತಕ್ಷಣ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿದರು.
ಸ್ಥಳದಲ್ಲಿ ಹೊಸ ಸೇತುವೆ ನಿರ್ಮಿಸುತ್ತಿರುವ ಸಿಬ್ಬಂದಿಯ ಸಹಾಯ ಪಡೆದ ಬಸ್ಸಿನ ಸಿಬ್ಬಂದಿಯು ಕೊನೆಗೂ ಬಸ್ಸನ್ನು ಸೇತುವೆಯಿಂದ ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಸೇತುವೆಯ ಎರಡೂ ಕಡೆಯಲ್ಲಿ ನೂರಾರು ವಾಹನಗಳು ಸಾಲಾಗಿ ನಿಂತಿದ್ದರೆ, ಕೆಲವು ವಾಹನಗಳು ಒಳ ಮಾರ್ಗಗಳ ಮೂಲಕ ಮುಂದೆ ಸಾಗಿವೆ. ವಾಹನ ಸಂಚಾರ ಯಥಾವತ್ತಿಗೆ ತರುವಲ್ಲಿ ಬಜ್ಪೆ ಪೊಲೀಸರು ಸಹಕರಿಸಿದರು.





