ಹೋರಾಟಗಾರ ತೇಲ್ತುಂಬ್ಡೆ ಜೀವಕ್ಕೆ ಅಪಾಯ: ಬಾಬಾ ಸಾಹೇಬ್ ಅಂಬೇಡ್ಕರ್ ಕುಟುಂಬದ ಆತಂಕ

ಫೋಟೊ ಕೃಪೆ: //twitter.com/AnandTeltumbde
ಮುಂಬೈ,ಫೆ.29: ಮಾನವಹಕ್ಕುಗಳ ಹೋರಾಟಗಾರ, ಸಾಹಿತಿ ಡಾ. ಆನಂದ್ ತೇಲ್ತುಂಬ್ಡೆ ಅವರನ್ನು ‘ಬೇಟೆಯಾಡಲಾಗುತ್ತಿರುವ’ ಬಗ್ಗೆ ತಾವು ತೀವ್ರ ಕಳವಳ ಹೊಂದಿರುವುದಾಗಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಕುಟುಂಬಿಕರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
2018ರ ಆಗಸ್ಟ್ನಲ್ಲಿ ಪುಣೆ ಪೊಲೀಸರು ದಾಖಲಿಸಿರುವ ಎಲ್ಗಾರ್ ಪರಿಷತ್ ಪ್ರಕರಣವನ್ನು ನ್ಯಾಯಾಲಯವು ತಳ್ಳಿಹಾಕುವುದನ್ನು ತಾವು ನಿರೀಕ್ಷಿಸುವುದಾಗಿ ಮಾಜಿ ಸಂಸತ್ ಸದಸ್ಯ ಪ್ರಕಾಶ್ ಯಶವಂತ್ರಾವ್ ಅಂಬೇಡ್ಕರ್, ಭೀಮರಾವ್ ಯಶವಂತ್ರಾವ್ ಅಂಬೇಡ್ಕರ್, ಆನಂದ್ರಾಜ್ ಯಶವಂತ್ರಾವ್ ಅಂಬೇಡ್ಕರ್ ಹಾಗೂ ತೇಲ್ತುಂಬ್ಡೆ ಅವರ ಪತ್ನಿ ರಮಾ ಅವರು ಜಂಟಿಯಾಗಿ ಸಹಿಹಾಕಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಹೈಕೋರ್ಟ್ ತೇಲ್ತುಂಬ್ಡೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಹಾಗೂ ಎಲ್ಗಾರ್ ಪರಿಷದ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಒಪ್ಪಿಸಬೇಕೆಂಬ ಕೇಂದ್ರ ಸರಕಾರದ ಮವಿಗೆ ಸಹಮತ ವ್ಯಕ್ತಪಡಿಸಿದೆ. ತೇಲ್ತುಂಬ್ಡೆ ಅವರನ್ನು ಹಲವು ವರ್ಷಳ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕೆಂಬ ಸರಕಾರದ ದುರುದ್ದೇಶವು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ಜಾಮೀನು ಕೋರಿ ಅವರು ಸುಪ್ರೀಂಕೋರ್ಟ್ನಲ್ಲಿ ಮಾಡಿರುವ ಮನವಿಗೆ ನ್ಯಾಯ ದೊರೆಯುವುದೆಂಬ ಭರವಸೆಯನ್ನು ತಾನು ಹೊಂದಿರುವುದಾಗಿ ಅದು ಹೇಳಿದೆ.
ಡಾ. ಆನಂದ್ ತೇಲ್ತುಂಬ್ಡೆ ಅಂಬೇಡ್ಕರ್ ಕುಟುಂಬದ ಭಾಗವಾಗಿದ್ದು, ಹೀಗಾಗಿ ಆ ಕುಟುಂಬದ ಅತ್ಯಂತ ಸುಲಭದ ಗುರಿಯಾದ ತೇಲ್ತುಂಬ್ಡೆ ಅವರ ಮೇಲೆ ಸರಕಾರವು ಗುರಿಯಿರಿಸಿರುವ ಸಾಧ್ಯತೆಯಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂದೇಹ ವ್ಯಕ್ತಪಡಿಸಲಾಗಿದೆ.
.ಎಲ್ಗಾರ್ ಪರಿಷದ್ ಸಭೆಯಲ್ಲಿ ತೇಲ್ತುಂಬ್ಡೆ ಭಾಗವಹಿಸದೆ ಇದ್ದರೂ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆಯೆಂದು ಹೇಳಿಕೆಯು ಆಪಾದಿಸಿದೆ. ಎಲ್ಗಾರ್ ಪರಿಷತ್ಪ್ರಕರಣದ ಇತರ ಆರೋಪಿಗಳಂತಲ್ಲದೆ, ತೇಲ್ತುಂಬ್ಡೆಯವರಿಂದ ಯಾವುದೇ ಸಾಕ್ಷ್ಯಾಧಾರಗಳು ಪಲೀಸರಿಗೆ ಲಭ್ಯವಾಗಿಲ್ಲ ಹಾಗೂ ಈಗಾಗಲೇ ಅವರು ಎರಡು ದಿನಗಳ ಕಾಲ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಆಪಾದಿಸಿದ್ದಾರೆ.
ತೇಲ್ತುಂಬ್ಡೆ ಅವರ ಬಂಧನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವ್ಯ ಪರಂಪರೆಗೆ ಕಳಂಕವುಂಟು ಮಾಡುವ ಹುನ್ನಾರದ ವಿರುದ್ಧ ಧ್ವನಿಯೆತ್ತುವಂತೆ ಅಂಬೇಡ್ಕರ್ ವಾದಿಗಳಿಗೆ ಕರೆ ನೀಡುವುದಾಗಿ ಅಂಬೇಡ್ಕರ್ ಕುಟುಂಬ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.







