“ಪ್ರಧಾನಿ ಬಳಿ ಜನನ ಪ್ರಮಾಣಪತ್ರವಿದೆ ಎಂದು ನೀವು ಭಾವಿಸಿದ್ದೀರಾ ?”
ಬಿಜೆಪಿ ಪ್ರ.ಕಾರ್ಯದರ್ಶಿ ಮುರಳೀಧರ ರಾವ್

ಹೈದರಾಬಾದ್, ಫೆ.29: ಕೇಂದ್ರ ಸರಕಾರವು ಸಿಎಎ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಿದೆಯೇ ಹೊರತು ಎನ್‌ಆರ್‌ಸಿ ಅಥವಾ ಎನ್‌ಪಿಆರ್ ಮೇಲಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳಿಧರ ರಾವ್ ಹೇಳಿದ್ದಾರೆ.
ಇಲ್ಲಿಯ ಸಿಸಿಆರ್‌ಟಿಯಲ್ಲಿ ಆಯೋಜಿಸಲಾಗಿದ್ದ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ನಡೆಸುವ ಬಗ್ಗೆ ತನ್ನ ಪಕ್ಷವು ಒಲವು ಹೊಂದಿದೆ ಎಂದರು.
ಎನ್‌ಸಿಆರ್/ಎನ್‌ಪಿಆರ್ ಸಂದರ್ಭದಲ್ಲಿ ಪೂರ್ವಜರ ಜನನ ದಿನಾಂಕಗಳನ್ನು ಕೇಳಿದರೆ ಪೌರತ್ವ ಸಾಬೀತುಗೊಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ರಾವ್, “ಪ್ರಧಾನಿ ನರೇಂದ್ರ ಮೋದಿಯವರ ಬಳಿ ಜನನ ಪ್ರಮಾಣಪತ್ರವಿದೆ ಎಂದು ನೀವು ಭಾವಿಸಿದ್ದೀರಾ?, ಅವರ ತಾಯಿಯ ಬಳಿ ಜನನ ಪ್ರಮಾಣಪತ್ರವಿದೆ ಎಂದು ಭಾವಿಸಿದ್ದೀರಾ?, ಎನ್‌ಆರ್‌ಸಿಯನ್ನು ಜಾರಿಗೊಳಿಸಲು ನಿರ್ಧರಿಸಿದಾಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಲಾಗುತ್ತದೆ ಮತ್ತು ಮಾರ್ಗಸೂಚಿಯನ್ನು ರೂಪಿಸಲಾಗುತ್ತದೆ” ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಸಿಎಎಯಿಂದ ಯಾವುದೇ ಭಾರತೀಯ ಪ್ರಜೆಗೆ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು.





