237 ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಕ್ರಮ: ಕೆ.ಎಸ್. ಈಶ್ವರಪ್ಪ

ಬಳ್ಳಾರಿ, ಫೆ.29: ಬಳ್ಳಾರಿ ಜಿಲ್ಲೆಯ 237 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಕುರಿತು ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ 146 ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳವನ್ನು ಗುರುತಿಸಿ, ವಿಸ್ತೃತ ಯೋಜನಾ ವರದಿ ತಯಾರಿಸಲು ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ತರಬೇತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿ.ಪಂ.ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಜಿಲ್ಲೆಯ 80 ಗ್ರಾ.ಪಂ.ಗಳಿಗೆ ಘನತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಘನತ್ಯಾಜ್ಯ ಸಂಗ್ರಹಣಾ ಮತ್ತು ವಿಲೇವಾರಿಯಲ್ಲಿ ಇಡೀ ರಾಜ್ಯದಲ್ಲಿಯೆ ಬಳ್ಳಾರಿ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಸಂತಸ ತಂದಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ಅಭಿನಂದನಾರ್ಹರು ಎಂದು ಈಶ್ವರಪ್ಪ ಹೇಳಿದರು.
ಪ್ರಸ್ತುತ 100 ಗ್ರಾಮ ಪಂಚಾಯತಿಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ 98 ಗ್ರಾಮ ಪಂಚಾಯತಿಗಳಿಗೆ ಸರಕಾರದಿಂದ ಅನುಮೋದನೆ ಪಡೆಯಲಾಗಿದ್ದು, ಅವುಗಳಲ್ಲಿ ಮೊದಲನೆ ಹಂತದಲ್ಲಿ ಅನುಮೋದನೆ ಪಡೆದ 16 ಗ್ರಾ.ಪಂ.ಗಳಿಗೆ ವಾಹನಗಳನ್ನು ಖರೀದಿಸಲಾಗಿದ್ದು, ಎರಡನೆ ಹಂತದಲ್ಲಿ 80 ಗ್ರಾ.ಪಂ.ಗಳಿಗೆ ವಾಹನಗಳನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಒಟ್ಟು 20ಲಕ್ಷ ರೂ.ಗಳವರೆಗೆ ಪ್ರತಿ ಗ್ರಾ.ಪಂ.ಗಳಿಗೆ ಸರಕಾರದಿಂದ ನೀಡಲಾಗುತ್ತಿದ್ದು, ಅದರಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ, ಸಂಗ್ರಹಣ ವಾಹನ ಖರೀದಿಗೆ, ಮನೆ ಮನೆ ಕಸ ಬುಟ್ಟಿ ವಿತರಣೆಗೆ ಹಾಗೂ ಕಸ ಸಂಗ್ರಹಕರಿಗೆ ವಿವಿಧ ರೀತಿಯ ಸುರಕ್ಷಿತ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಶೌಚಾಲಯ, ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಿದಂತೆ ರಾಜ್ಯದಲ್ಲಿರುವ 6021 ಗ್ರಾಪಂಗಳಲ್ಲಿಯೂ ಸೋಲಾರ್ ವಿದ್ಯುತ್‌ದೀಪ ಅಳವಡಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಮನೆ ಮನೆ ನೀರು ಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಯತ್ನ ನಡೆಸಲಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಮುಗಿದ ಕಡೆ ಇದೇ ವರ್ಷದಿಂದ ಕೆಲಸ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ನಾಗೇಂದ್ರ ವಹಿಸಿದ್ದರು. ಜಿ.ಪಂ.ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸಿಇಒ ನಿತೀಶ್, ಜಿ.ಪಂ.ಸದಸ್ಯರಾದ ಅಲ್ಲಂ ಪ್ರಶಾಂತ, ಮಾನಯ್ಯ, ಸೌಭಾಗ್ಯ, ಜಿಪಂ ಉಪ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.







