ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಬಿಚ್ಚಿಟ್ಟ ವಸುಂಧರಾ ಭೂಪತಿ
ಲಿಂಗಪತ್ತೆಗೆ ವೈದ್ಯರಿಂದ 'ಸೀಕ್ರೆಟ್ ಕೋಡ್'

ಬೆಂಗಳೂರು, ಫೆ.29: ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿಯೇ ಹೆಚ್ಚಾಗಿ ಬೆಳಕಿಗೆ ಬಂದಿದ್ದು, ಕೆಲ ವೈದ್ಯರು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಲಿಂಗಪತ್ತೆ ಮಾಡುವುದಲ್ಲದೆ, ಗ್ರಾಹಕರೊಂದಿಗೆ ಸಂವಾದ ನಡೆಸಲು ಸೀಕ್ರೆಟ್ ಕೋಡ್‌ಗಳನ್ನೇ ಬಳಸುತ್ತಾರೆ ಎಂದು ಚಿಂತಕಿ ಡಾ.ವಸುಂಧರಾ ಭೂಪತಿ ಹೇಳಿದರು.
ಶನಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ಗ್ಲೋಬಲ್ಎಂಟರ್ ಟೇನರ್ಸ್, ಚಾನ್ ವಾಸ್ಕಿ ಪಬ್ಲಿಕೇಷನ್ ವತಿಯಿಂದ ಆಯೋಜಿಸಿದ್ದ, ಲೇಖಕ ಜೆ.ಎಂ.ಪ್ರಹ್ಲಾದ್ ಅವರ 'ಡಾಕ್ಟರ್ ಸುಕನ್ಯಾ'(ಇಂಗ್ಲೀಷ್ ಅವತರಣಿಕೆ) ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯ ವೈದ್ಯನೋರ್ವ ಗರ್ಭಿಣಿ ಮಹಿಳೆಯನ್ನು ಸ್ಕ್ಯಾನಿಂಗ್‌ಗೆ ಒಳಪಡಿಸುವ ಮೊದಲು, ಆಕೆಯ ಸಂಬಂಧಿಕರಿಗೆ 'ಗೋ ಹೆಡ್' ಎಂದರೆ ಗಂಡುಮಗು, 'ಸ್ಟಾಪ್ ಇಟ್' ಎಂದರೆ ಹೆಣ್ಣು ಮಗು ಎಂದು ಮಾಹಿತಿ ನೀಡುತ್ತಾನೆ. ಮತ್ತೊಂದು ಆಸ್ಪತ್ರೆಯಲ್ಲಿ ಶುಗರ್ ಲೇಸ್ ಟೀ (ಹೆಣ್ಣು), ಶುಗರ್ ಟಿೀ (ಗಂಡು ಮಗು) ಎನ್ನುತ್ತಾರೆ.
ಇನ್ನೂ ಹಲವು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ನಂತರ ನೇರವಾಗಿ ಆಸ್ಪತ್ರೆಯ ಈಶ್ವರನ ಫೋಟೋಗೆ ನಮಸ್ಕರಿಸುತ್ತಾರೆ. ಇದು ಗರ್ಭದಲ್ಲಿ ಗಂಡು ಮಗು ಇದೆ ಎಂದರ್ಥ. ಇಂತಹ ಆತಂಕಕಾರಿ ವಿಚಾರ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಡೆಯುವ ಬಗ್ಗೆ ಖಾಸಗಿ ಆಸ್ಪತ್ರೆಗಗಳ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದಾಗ ಬೆಳಕಿಗೆ ಬಂದಿದೆ ಅವರು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆಯಿಂದಲೇ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ಬೆಂಗಳೂರಿನಲ್ಲಿ 1 ಸಾವಿರ ಪುರುಷರಿದ್ದರೆ, 908 ಹೆಣ್ಣು ಮಕ್ಕಳಿದ್ದಾರೆ. ಅದೇ ರೀತಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲೂ ಅತಿ ಕಡಿಮೆ ಲಿಂಗಾನುಪಾತ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನ ಹಲವು ಭಾಗಗಳಲ್ಲಿ ಈಗಲೂ ಹೆಣ್ಣು ಮಗು ಹುಟ್ಟಿದ ತಕ್ಷಣ ನೀರಿನಲ್ಲಿ ಮುಳುಗಿಸಿ, ಅಥವಾ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗುತ್ತಿದೆ. ಇತ್ತೀಚಿಗೆ ಪಾಂಡಿಚೇರಿಯಲ್ಲೂ ಹೆಣ್ಣು ಮಗುವನ್ನು ಕುಕ್ಕರ್‌ನಲ್ಲಿ ಹಾಕಿ, ಕೊಲೆ ಮಾಡಲಾಗಿರುವ ದುರ್ಘಟನೆ ಸಂಭವಿಸಿತು. ಇದರ ವಿರುದ್ಧ ಪಿಸಿ ಮತ್ತು ಪಿಎನ್‌ಡಿಟಿ ಆಕ್ಟ್ ಅಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೃಢಪಡಿಸಿದ್ದರೂ, ಅನೇಕರು ತಪ್ಪಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ.ರೇವತಿ, ಚಿತ್ರಕಲಾವಿದರಾದ ಅಭಿನಯ, ಶ್ರೀನಾಥ್ ವಶಿಷ್ಠ, ಚಂದ್ರಿಕ ವಿಜಯ್ ಸೇರಿದಂತೆ ಪ್ರಮುಖರಿದ್ದರು.







