ಅದಾನಿ-ಅಂಬಾನಿಗೆ ನೀಡುವ ಆರ್ಥಿಕ ಸೌಲಭ್ಯ ಮಹಿಳೆಗೆ ಯಾಕಿಲ್ಲ: ಮೋಟಮ್ಮ ಪ್ರಶ್ನೆ
ಬೆಂಗಳೂರು, ಫೆ.29: ಕೇಂದ್ರ ಸರಕಾರ ಅಂಬಾನಿ, ಅದಾನಿ ಸೇರಿದಂತೆ ಬಂಡವಾಳಶಾಹಿಗಳಿಗೆ ನೀಡುತ್ತಿರುವ ಆರ್ಥಿಕ ಸೌಲಭ್ಯ, ದೇಶದ ಮಹಿಳಾ ಸಮುದಾಯಕ್ಕೆ ಯಾಕೆ ನೀಡುತ್ತಿಲ್ಲವೆಂದು ಮಾಜಿ ಸಚಿವೆ ಮೋಟಮ್ಮ ಪ್ರಶ್ನಿಸಿದ್ದಾರೆ.
ಶನಿವಾರ ಗ್ರಾಮ ಸೇವಾ ಸಂಘ ಹಾಗೂ ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆ ಮತ್ತು ಕಾಯಕ ಕುರಿತ ಒಂದು ದಿನದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಮಹಿಳೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಮಹಿಳಾ ಸಮುದಾಯದ ಸ್ವ ಉದ್ಯೋಗಕ್ಕಾಗಿ ಹಲವು ಸೌಲಭ್ಯಗಳನ್ನು ನೀಡಲಾಗಿತ್ತು. ಅದರಿಂದಾಗಿ ಜ್ಯುವೆಲರಿ ಅಂಗಡಿ, ಬ್ಯುಟಿ ಪಾರ್ಲರ್, ಬೇಕರಿ ಸೇರಿದಂತೆ ವಿವಿಧ ಉದ್ಯೋಗದಲ್ಲಿ ತೊಡಗಲು ಸಾಧ್ಯವಾಗಿತ್ತು. ಅದರೆ, ಈಗಿನ ಸರಕಾರ ಕೌಶಲ್ಯಾಭಿವೃದ್ಧಿಯಡಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದೇಳುತ್ತಿದೆ. ಅದು ಎಷ್ಟರಮಟ್ಟಿಗೆ ಮಹಿಳೆಯರಿಗೆ ಉಪಯೋಗವಾಗಿದೆ ಎಂಬುದನ್ನು ಫಲಾನುಭವಿಗಳೇ ಹೇಳಬೇಕೆಂದು ಅವರು ಅನುಮಾನ ವ್ಯಕ್ತಪಡಿಸಿದರು.
ಮಹಿಳೆಯ ದಿನನಿತ್ಯದ ದುಡಿಮೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಅದಕ್ಕೆ ನಮ್ಮ ಸಮಾಜದಲ್ಲಿ ಇದುವರೆಗೂ ಬೆಲೆ ಸಿಕ್ಕಿಲ್ಲ. ತಾಯಿಯಾಗಿ, ಹೆಂಡತಿಯಾಗಿ, ಅಡುಗೆ ಕೆಲಸದವಳಾಗಿ, ಹೊಲದಲ್ಲಿ ಕಾರ್ಮಿಕಳಾಗಿ ಹೀಗೆ ಪ್ರತಿದಿನ ಹಲವು ಜವಾಬ್ದಾರಿಗಳನ್ನು ಹೊರುವ ಮಹಿಳೆಗೆ ಯಾವ ಮಾನ್ಯತೆ ಇಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಹಿಳೆ ಮನೆಯಲ್ಲಾಗಲಿ, ವೃತ್ತಿಯಲ್ಲಾಗಲಿ ಭಾವನಾತ್ಮಕತೆಯನ್ನು ಪಕ್ಕಕ್ಕಿಟ್ಟು ತಮ್ಮ ಅಸ್ತಿತ್ವವನ್ನು ಕಟ್ಟಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಎಲ್ಲಿಯೇ ಶೋಷಣೆ ನಡೆದರೂ ಪ್ರತಿಭಟನೆ ಮಾಡುವ ಮನಸ್ಥಿತಿಯನ್ನು ರೂಪಿಸಿಕೊಂಡು ಮುನ್ನಡೆಯಬೇಕಾಗಿದೆ. ಇದಕ್ಕೆ ಮಹಿಳಾ ಸಮುದಾಯ ಸಂಘಟಿತರಾಗಬೇಕೆಂದು ಅವರು ಆಶಿಸಿದರು.
ಹಿರಿಯ ಆರ್ಥಿಕ ತಜ್ಞೆ ಜಯಾ ಮೆಹ್ತಾ ಮಾತನಾಡಿ, ನಮ್ಮ ಇಂದಿನ ಸರಕಾರ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಬಿಟ್ಟಿಕೊಡಲು ಮುಂದಾಗಿದೆ. ಇದು ಅಪಾಯಕಾರಿ ನಿಲುವಾಗಿದೆ. ಇದರ ಬದಲಿಗೆ, ಮಹಿಳಾ ಸಹಕಾರಿ ಸಂಘಗಳಿಗೆ ಕೃಷಿ ಭೂಮಿ ನೀಡಿ, ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಬೇಕು. ಇದರಿಂದ ದೇಶದ ಸಮಗ್ರ ಆರ್ಥಿಕತೆ ಬೆಳವಣಿಗೆ ಸಾಧಿಸಲಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ಮಹಿಳೆಯ ಕೊಡುಗೆ ಅಪಾರವಾಗಿದೆ. ಆದರೂ ಮಹಿಳೆ ಇಂದಿಗೂ ಭೂ ಮಾಲಕಳಾಗಿಲ್ಲ. ಹೊಲದಲ್ಲಿ ಪುರುಷನಷ್ಟೆ ಮಹಿಳೆ ದುಡಿದರೂ ಸಂಬಳದಲ್ಲಿ ಸಮಾನತೆ ಇಲ್ಲವಾಗಿದೆ. ಹೀಗಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸರಕಾರಿ ಭೂಮಿಯನ್ನು ಕೊಟ್ಟು, ಕೃಷಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ಮಹಿಳಾ ರಾಜಕಾರಣಿಗಳ ಬದುಕು ಹೂವಿನ ಹಾಸಿಗೆಯಲ್ಲ. ಅಡುಗೆ ಮನೆಯಿಂದ ಪ್ರಾರಂಭಗೊಂಡು ಎಲ್ಲ ರೀತಿಯ ಜವಾಬ್ದಾರಿಗಳನ್ನು ಪೂರೈಸಿಯೇ ಮನೆಯಿಂದ ಹೊರಗಡೆ ಬಂದು ರಾಜಕೀಯ ಮಾಡಬೇಕಾದ ಪರಿಸ್ಥಿತಿ ಇದೆ. ಆದರೂ ನನ್ನ ಗಂಡ ಈ ಅಡುಗೆ ಚೆನ್ನಾಗಿಲ್ಲ. ಉಪ್ಪಿಲ್ಲ, ಖಾರಯಿಲ್ಲವೆಂದು ಸಿಟ್ಟಾಗುತ್ತಾರೆ. ಇದರಿಂದ ನನಗೆ ಬೇಸರವಾಗುತ್ತದೆ. ಆದರೂ ಇದೆಲ್ಲವನ್ನು ನಿಭಾಯಿಸಿಕೊಂಡೇ ರಾಜಕೀಯ ಬದುಕಿನಲ್ಲೂ ಸಕ್ರಿಯಳಾಗಿದ್ದೇನೆ.
-ಮೋಟಮ್ಮ, ಮಾಜಿ ಸಚಿವೆ







