ಈ ಬಾರಿಯ ಉಪ್ಪಿನಂಗಡಿ ಕಂಬಳ ಸಾಧಕರಿಗೆ ಅರ್ಪಣೆಯಾಗಲಿ: ಡಿ.ವಿ.

ಉಪ್ಪಿನಂಗಡಿ: ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಂಗ ಸೇರಿದಂತೆ ಎಲ್ಲಾ ರೀತಿಯ ಹೋರಾಟಗಳು ನಡೆಯುತ್ತಿವೆ. ಕಂಬಳದ ಮೂಲಕ ಗ್ರಾಮೀಣ ಪ್ರತಿಭೆಗಳಿಂದು ಜಗತ್ತೇ ಕಂಬಳದತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಅವರ ಸಾಧನೆ ಯನ್ನು ಮೆಚ್ಚುವಂತದ್ದೆ. ಅದ್ದರಿಂದ ಇಂದಿನ 35ನೇ ವರ್ಷದ ವಿಜಯ- ವಿಕ್ರಮ ಕಂಬಳವು ಆ ಸಾಧಕರಿಗೆ ಅರ್ಪಣೆಯಾಗಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ನಡೆಯುತ್ತಿರುವ 35ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳದಲ್ಲಿ ಶನಿವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳುನಾಡ ಮಣ್ಣಿನ ವೀರ ಕ್ರೀಡೆಯಾದ ಕಂಬಳದಲ್ಲಿ ಕೋಣಗಳನ್ನು ಓಡಿಸುವವರು ಯಾವುದೇ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ, ತರಬೇತಿಯಿಲ್ಲದೆ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಜಗತ್ತೇ ಕಂಬಳ ಕ್ರೀಡೆಯತ್ತ ತಿರುಗಿ ನೋಡುವಂತಾಗಿದೆ. ಇವರಿಂದಾಗಿ ಕಂಬಳಕ್ಕಿರುವ ಅಡೆತಡೆ ನಿವಾರಣೆಗೆ ಹೋರಾಟ ನಡೆಸುತ್ತಿರುವವರಿಗೆಲ್ಲಾ ಹೊಸ ವೇಗ ಸಿಕ್ಕಿದೆ. ಆದ್ದರಿಂದ ಎಲ್ಲಾ ಅಡೆತಡೆಗಳನ್ನು ಮೀರಿ ಕಂಬಳ ಕ್ರೀಡೆ ಉಳಿದು ಬೆಳೆಯುತ್ತದೆ ಎಂಬ ವಿಶ್ವಾಸ ನನಗಿದೆ. ಜನರ ಭಾವನೆಗಳಿಗೆ ಹೊಸ ದಿಕ್ಕನ್ನು ತೋರಿಸುವ ಕೆಲಸ ಕಂಬಳದಿಂದಾಗಲಿ. ಇನ್ನಷ್ಟು ಗ್ರಾಮೀಣ ಪ್ರತಿಭೆಗಳು ಈ ಕ್ರೀಡೆಯ ಮೂಲಕ ಅರಳಬೇಕು. ಕಂಬಳದ ಉಳಿವಿಗಾಗಿ ಯಾವುದೇ ನೆರವನ್ನು ನೀಡಲು ತಾನು ಸದಾ ಸಿದ್ಧನಿದ್ದು, ನಮ್ಮ ಮಣ್ಣಿನ ಸಂಸ್ಕøತಿಯ ಕ್ರೀಡೆಯಾದ ಕಂಬಳವು ಶಾಶ್ವತವಾಗಿ ಉಳಿಯಬೇಕು. ಯಾವುದೇ ಅಡೆತಡೆ ಗಳು ಬಂದರೂ ಅದನ್ನು ನಿವಾರಿಸುವ ಶಕ್ತಿ ತುಳುನಾಡ ಜನರಿಗಿದ್ದು, ಆದ್ದರಿಂದ ಈ ಕ್ರೀಡೆಗೆ ಯಾವತ್ತೂ ಅಳಿವು ಬರಲು ಸಾಧ್ಯವಿಲ್ಲ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಒಬ್ಬ ವ್ಯಕ್ತಿಗೆ ಕಂಬಳ ನಡೆಸಲು ಸಾಧ್ಯವಿಲ್ಲ. ಎಲ್ಲರ ಸಹಕಾರವಿದ್ದಾಗ ಮಾತ್ರ ಅದು ನಡೆಯಲು ಸಾಧ್ಯ. ಕಂಬಳವೆನ್ನುವುದು ಒಗ್ಗಟ್ಟಿನ ಸಂಕೇತವಾಗಿದ್ದು, ಇದು ಇನ್ನಷ್ಟು ಬೆಳೆದು ಮುಂದಿನ ಪೀಳಿಗೆಗೂ ತುಳುನಾಡಿನ ಸೌಹಾರ್ದತೆಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿ ಎಂದರು.
ಈ ಸಂದರ್ಭ ಎಂ.ಆರ್.ಜಿ. ಗ್ರೂಪ್‍ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಬ್ಬರಿಗೊಬ್ಬರನ್ನು ಪರಸ್ಪರ ಪ್ರೀತಿಸಿ, ಸಾಮರಸ್ಯದ ಬದುಕುವುದನ್ನು ಕಂಬಳವು ನಮಗೆ ಕಲಿಸಿಕೊಡುತ್ತದೆ. ಆದ್ದರಿಂದ ಈ ಕ್ರೀಡೆ ಎಂದೆಂದಿಗೂ ಉಳಿಯಬೇಕು. ಮಂಗಳೂರಿನಲ್ಲಿರುವ ತನ್ನ ಜಾಗದಲ್ಲಿ ಕಂಬಳಕ್ಕಾಗಿ ಜೋಡುಕರೆ ನಿರ್ಮಿಸಿ, ಕಂಬಳ ನಡೆಸುವುದಕ್ಕೆ ಜಾಗ ನೀಡುವುದಾಗಿ ತಿಳಿಸಿದರು.
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ಜಾತಿ, ಧರ್ಮದವರು, ಎಲ್ಲಾ ಪಕ್ಷದವರು ಒಗ್ಗೂಡಿ ಒಂದು ಕ್ರೀಡೆಯ ಉಳಿವಿಗಾಗಿ ಹೋರಾಟ ಮಾಡಿದ್ದರೆ ಅದು ಕಂಬಳ ಮಾತ್ರ. ಕಂಬಳಕ್ಕೆ ಸರಕಾರದಿಂದ ಇನ್ನಷ್ಟು ಪ್ರೋತ್ಸಾಹ ಸಿಗಬೇಕಾಗಿದ್ದು, ಬಜೆಟ್‍ನಲ್ಲಿ 5 ಕೋ.ರೂ. ನೀಡಬೇಕು. ಕಂಬಳದ ಅಕಾಡಮಿ ನಿರ್ಮಿಸಿ ಪಿಲಿಕುಳದಲ್ಲಿ ಅದರ ಕಟ್ಟಡ ನಿರ್ಮಾಣಕ್ಕಾಗಿ ಎರಡು ಎಕರೆ ಜಾಗ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರಲ್ಲದೆ, ಪೇಟಾದವರು ಎಷ್ಟೇ ಅಡೆತಡೆಗಳನ್ನು ತಂದರೂ ಅದೆಲ್ಲಾವನ್ನು ಮೀರಿ ಕಂಬಳವನ್ನು ಉಳಿಸಲಿದ್ದೇವೆ. ಇದರೊಂದಿಗೆ ತುಳುನಾಡ ಮತ್ತೊಂದು ಜನಪದ ಕ್ರೀಡೆಯಾದ ಕೋಳಿ ಅಂಕಕ್ಕೂ ಸಂಘಟನೆಯೊಂದನ್ನು ರೂಪಿಸಿ ಅದನ್ನು ನಿರ್ಭೀತಿಯಿಂದ ನಡೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಆರಾಧ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮಂಜುನಾಥ ಆರಾಧ್ಯ, ಅಂಧರ ಕ್ರಿಕೆಟ್ ಅಸೋಸಿಯೇಶನ್‍ನ ಅಧ್ಯಕ್ಷ ಮಹಾಂತೇಶ್ ಶಿವದಾಸನ್ನವರ್, ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ರಾಮ- ಲಕ್ಷ್ಮಣ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ, ಕಂಬಳ ಕೋಣಗಳ ಯಜಮಾನ ಬಾರ್ಕೂರು ಶಾಂತರಾಮ ಶೆಟ್ಟಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೊಡ್ರಿಗಸ್, ಪುತ್ತೂರು ತಹಶೀಲ್ದಾರ್ ರಾಹುಲ್ ಶಿಂಧೆ, ನ್ಯಾಯವಾದಿ ರಾಜಶೇಖರ್ ಹಿಲ್ಯಾರು, ಬನ್ನೂರು ಸಿಎ ಬ್ಯಾಂಕ್ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ತಾ.ಪಂ. ಸದಸ್ಯ ಮುಕುಂದ ಬಜತ್ತೂರು, ನಿವೃತ ತಹಶೀಲ್ದಾರ್ ವಾಮನರಾವ್, ನಾರಾಯಣ ಶೆಟ್ಟಿ ಬೆಳ್ಳಿಪ್ಪಾಡಿ, ಕಡಬ ಡೆಪ್ಯೂಟಿ ತಹಶೀಲ್ದಾರ್ ದಾಮೋದರ್, ಕಂಬಳ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ವಿಟ್ಲ- ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಕಂಬಳ ಸಮಿತಿಯ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಮುಖರಾದ ಸುಮಾ ಅಶೋಕ್ ರೈ, ಗಂಗಾಧರ ಶೆಟ್ಟಿ ಮಠಂತಬೆಟ್ಟು, ಲೊಕೇಶ್ ಶೆಟ್ಟಿ, ಸೀತಾರಾಮ ರೈ ಕೆದಂಬಾಡಿ ಗುತ್ತು, ರೋಹಿತ್ ಹೆಗ್ಡೆ ಎರ್ಮಾಳು, ಡಾ. ಜಯಪ್ರಕಾಶ್ ಕೋಡಿತೋನಡ್ಕ, ಮಾರಪ್ಪ ಭಂಡಾರಿ, ಉದ್ಯಮಿಗಳಾದ ಲಕ್ಷ್ಮಣ್ ಮಣಿಯಾಣಿ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಯೋಗೀಶ್ ಕಡ್ತಿಲ, ಚಂದಪ್ಪ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಕಂಬಳ ಸಮಿತಿಯ ವೆಬ್‍ಸೈಟ್ ಅನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಅನಾವರಣಗೊಳಿಸಿದರು. ಆರ್ಥಿಕ ಸಂಕಷ್ಟದಲ್ಲಿರುವ ಕಂಬಳ ಸಮಿತಿಯ ಕೃಷ್ಣಪ್ಪ ಪೂಜಾರಿ ಅವರಿಗೆ ಕಂಬಳ ಸಮಿತಿಯ ವತಿಯಿಂದ ಧನಸಹಾಯ ನೀಡಲಾಯಿತು.
ಕಂಬಳ ಸಮಿತಿಯ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು ಸ್ವಾಗತಿಸಿದರು. ಸಹ ಸಂಚಾಲಕ ಜಯಪ್ರಕಾಶ್ ಬದಿನಾರು ವಂದಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ನೆಕ್ಕರೆ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕಂಬಳ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ವಿಠಲ ಶೆಟ್ಟಿ ಕೊಲ್ಯೊಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ಸಮಿತಿಯ ದಿಲೀಪ್ ಶೆಟ್ಟಿ ಕರಾಯ, ಶಿವರಾಮ ಶೆಟ್ಟಿ ಗೋಳ್ತಮಜಲು, ದಯಾನಂದ ಪಿಲಿಗುಂಡ, ಕೇಶವ ರಂಗಾಜೆ, ಹರಿಪ್ರಸಾದ್ ಶೆಟ್ಟಿ, ಆದರ್ಶ ಕಜೆಕ್ಕಾರು, ವಿಶ್ವನಾಥ ಶೆಟ್ಟಿ ಕಂಗ್ವೆ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.







