ಕನ್ನಡದಲ್ಲಿ ಉತ್ಕೃಷ್ಟ ವಿಜ್ಞಾನ ಬರಹಗಳು ಮೂಡಿಬರಲಿ: ಸಿಎನ್‌ಆರ್ ರಾವ್

ಬೆಂಗಳೂರು, ಫೆ.29: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ವಿಜ್ಞಾನ ಬರಹಗಳು ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯಪ್ರವೃತ್ತವಾಗಲಿ ಎಂದು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ವಿಜ್ಞಾನಿ ಸಿಎನ್ಆರ್ ರಾವ್ ಆಶಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ: ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಜಗತ್ತಿನಲ್ಲಿರುವ ಎಲ್ಲ ವಿಜ್ಞಾನ ಬರಹಗಳು ಸುಲಭವಾಗಿ ಸಿಗುತ್ತವೆ. ಅದೇ ರೀತಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಿಗುವಂತಾಗಬೇಕು. ಕಿರುಪುಸ್ತಕದ ರೂಪದಲ್ಲಿಯೇ ಜನಪ್ರಿಯ ವಿಜ್ಞಾನ ಬರಹಗಳು ಕನ್ನಡಕ್ಕೆ ಅನುವಾದಗೊಂಡು ವಿದ್ಯಾರ್ಥಿಗಳ ಕೈ ಸೇರಲಿ ಎಂದು ಅವರು ಹೇಳಿದರು.
ಕಳೆದ ಕೆಲವು ದಶಕಗಳ ಹಿಂದೆ ಚೀನಾ ಹಾಗೂ ಭಾರತ ಸಮವಾಗಿದ್ದವು. ಆದರೆ, ಈಗ ಚೀನಾ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿಯೆ ಮುಂಚೂಣಿಯಲ್ಲಿದೆ. ಆ ನಂತರ ಅಮೆರಿಕಾ ಇದೆ. ಚೀನಾ ಪ್ರಕಟಿಸುತ್ತಿರುವ ವಿಜ್ಞಾನ ಲೇಖಕನಗಳಿಗೆ ಹೋಲಿಸಿದರೆ, ಭಾರತ ಶೇ.20ರಷ್ಟು ಪ್ರಗತಿಯನ್ನು ಸಾಧಿಸಿಲ್ಲ. ಇದು ನನಗೆ ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಅವರು ವಿಷಾದಿಸಿದರು.
ಜಗತ್ತಿನ ಯಾವುದೇ ಶ್ರೇಷ್ಠವಾದ ವಸ್ತು, ವಿಷಯವನ್ನು ಚೀನಾ ಬಹುಬೇಗನೇ ತನ್ನದಾಗಿ ಮಾಡಿಕೊಂಡು ಬಿಡುತ್ತದೆ. ನನ್ನದೇ ಮೂರು ಕೃತಿಗಳು ಚೀನಾ ಭಾಷೆಗೆ ಅನುವಾದಗೊಂಡು ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ. ಅದೇ ಮಾದರಿಯಲ್ಲಿ ಭಾರತದಲ್ಲೂ ವಿಜ್ಞಾನ ಲೇಖನಗಳು ಹೆಚ್ಚು ಹೆಚ್ಚು ಪ್ರಕಟಗೊಳ್ಳಬೇಕೆಂದು ಅವರು ಹೇಳಿದರು.
ಅಂತರ್‌ರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಭಾರತದ ವಿಜ್ಞಾನಿಗಳ ಲೇಖನಗಳು ಪ್ರಕಟವಾಗುವುದೇ ಇಲ್ಲ. ಹಾಗೂ ಭಾರತದ ಇತರೆ ಭಾಷೆಗಳಲ್ಲಿ ಅನುವಾದಿತ ವಿಜ್ಞಾನ ಲೇಖನಗಳು ಹೆಚ್ಚಾಗಿ ಕಾಣಸಿಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ದೊಡ್ಡ ಕೊರತೆ ಎದುರಿಸುತ್ತಿದ್ದಾರೆ. ಕನ್ನಡದ ಮಟ್ಟಿಗಾದರೂ ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿಜ್ಞಾನ ಲೇಖನಗಳು ಕನ್ನಡಕ್ಕೆ ಅನುವಾದಗೊಳ್ಳಲಿ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ಹಿರಿಯ ವಿಜ್ಞಾನಿ ಸಿಎನ್ಆರ್ ರಾವ್ ಆಶಿಸಿದಂತೆ ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು ಹೊರ ತರುವ ನಿಟ್ಟಿನಲ್ಲಿ ಶೀಘ್ರದಲ್ಲೇ ವಿಜ್ಞಾನ ಬರಹಗಾರರಿಗೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷಾ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಹೊನ್ನೇಗೌಡ ಮತ್ತಿತರರಿದ್ದರು.
ನನ್ನ ಬಾಲ್ಯ ಕಾಲದ ಬೆಂಗಳೂರು ಚಿಕ್ಕದಾಗಿತ್ತು. ನನ್ನ ಮನೆ ಎದುರಿಗೆ ಡಿ.ವಿ.ಗುಂಡಪ್ಪನವರ ಮನೆಯಿತ್ತು. ಆಗಾಗ ಮಾತನಾಡಿಸುತ್ತಿದ್ದರು. ಆಗ ಬೆಂಗಳೂರಿನಲ್ಲಿ ಎಲ್ಲರೂ ಎಲ್ಲರಿಗೂ ಪರಿಚಯವಿತ್ತು. ಆದರೆ, ಈಗ ಬೆಂಗಳೂರಿನ ಬಸವನಗುಡಿ ಸುತ್ತಮುತ್ತ ಪ್ರದೇಶದಲ್ಲಿ ನನ್ನ ಸಂಬಂಧಿಕರಿದ್ದು, ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆರಡು ಕಿಮೀ ಹೋಗುವುದಕ್ಕೆ ಗಂಟೆಗಟ್ಟಲೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು ರೀತಿಯಲ್ಲಿ ಬೆಂಗಳೂರು ಹುಚ್ಚೆದ್ದು ಹೋಗಿದೆ.
-ಸಿಎನ್‌ಆರ್ ರಾವ್, ಹಿರಿಯ ವಿಜ್ಞಾನಿ







