ಮಾ.3ರಂದು ಸಂವಿಧಾನ ಉಳಿಸಿ, ಮೀಸಲಾತಿ ರಕ್ಷಿಸಿ ಜನಾಂದೋಲನ ರ್ಯಾಲಿ
ಬೆಂಗಳೂರು, ಫೆ.29: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹಾಗೂ ಪಿಟಿಸಿ ಕಾಯ್ದೆ ವಿರುದ್ಧದ ತೀರ್ಪುಗೆ ಸಂಬಂಧಿಸಿದಂತೆ ತಿದ್ದುಪಡಿ ಕಾಯ್ದೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯು, ಫೆ.3ರಂಂದು ಪುರಭವನದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಸಂವಿಧಾನ ಉಳಿಸಿ, ಮೀಸಲಾತಿ ರಕ್ಷಿಸಿ ಜನಾಂದೋಲನ ರ್ಯಾಲಿಯನ್ನು ಹಮ್ಮಿಕೊಂಡಿದೆ.
ಶನಿವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ, ಮಾ.3ರಂದು ಬೆಳಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೇ ಬೆಂಗಳೂರಿನಲ್ಲಿ ಪುರಭವನದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ತಮಟೆ, ಖಂಜರಿ ಹಾಗೂ ಡೊಳ್ಳುಗಳೊಂದಿಗೆ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಮೀಸಲಾತಿ ದೇಶದಲ್ಲಿನ ಮೇಲು-ಕೀಳು, ಬಡವ-ಬಲ್ಲಿದ, ಅನಕ್ಷರತೆ-ಅಸ್ಪಶ್ಯತೆಗಳ ತಾರತಮ್ಯ ನಿವಾರಿಸಿ ಸಮಾಜಿಕ ನ್ಯಾಯ ತರುವ ಸಾಧನವಾಗಿದೆ. ಪದೇ ಪದೇ ಸುಪ್ರೀಂ ಕೋರ್ಟ್ ಮೀಸಲಾತಿ ವಿರುದ್ಧ ಹತ್ತಾರು ವ್ಯತಿರಿಕ್ತ ತೀರ್ಪು ನೀಡಿ ಸಂವಿಧಾನ ಆಶಯಗಳನ್ನು ದುರ್ಬಲಗೊಳಿಸುತ್ತಿದೆ ಎಂದು ದೂರಿದರು.
ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಮೂಲಭೂತ ಹಕ್ಕಾಗಿ ಪ್ರತಿಷ್ಠಾಪಿಸಲು ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.







