ಎಪ್ರಿಲ್ 1ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ಹೊಸದಿಲ್ಲಿ, ಫೆ.29: ಎಪ್ರಿಲ್ 1ರಿಂದ ದೇಶದಾದ್ಯಂತ ಬಿಎಸ್-6 ಇಂಧನ ಗುಣಮಟ್ಟಕ್ಕೆ ಪರಿವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ 1ರಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರದಲ್ಲಿ ತುಸು ಹೆಚ್ಚಳವಾಗಲಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ತಿಳಿಸಿದೆ.
ಆದರೆ ತೈಲ ಬೆಲೆಗಳಲ್ಲಿ ತೀವ್ರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹೊರಿಸುವುದಿಲ್ಲ ಎಂದು ಇಂಡಿಯನ್ ಆಯಿಲ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ. ಎಪ್ರಿಲ್ 1ರಿಂದ ಭಾರತ್ ಸ್ಟೇಜ್(ಬಿಎಸ್)6 ಇಂಧನ ಗುಣಮಟ್ಟ ದರ್ಜೆಗೆ ಪರಿವರ್ತನೆಯಾಗಲಿದ್ದು, ಇದಕ್ಕೆ ಸರ್ವಸಿದ್ಧತೆ ನಡೆಸಲಾಗಿದೆ . ಬಿಎಸ್-4 ಹಂತದಿಂದ ಈಗ ನೇರವಾಗಿ ಬಿಎಸ್-6 ಹಂತಕ್ಕೆ ಜಂಪ್ ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಬಿಎಸ್-4 ಇಂಧನ ಗುಣಮಟ್ಟದಲ್ಲಿ ಗಂಧಕದ ಪ್ರಮಾಣ 50 ಪಿಪಿಎಂ ಆಗಿದ್ದರೆ, ಬಿಎಸ್-6 ದರ್ಜೆಯಲ್ಲಿ ಗಂಧಕದ ಪ್ರಮಾಣ 10 ಪಿಪಿಎಂ ಆಗಿದೆ. ವಾಹನಗಳಿಂದ ಹೊರಬೀಳುವ ಹೊಗೆಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಸರಕಾರ ಯುರೋಪಿಯನ್ ಮಾದರಿಯನ್ನು ಅನುಸರಿಸುತ್ತಿದೆ. ಬಿಎಸ್-6 ದರ್ಜೆಗೆ ಪರಿವರ್ತನೆಯಾದ ಬಳಿಕ ಮೋಟಾರು ವಾಹನಗಳು ಕಡಿಮೆ ಹೊಗೆ ಉಗುಳಲಿವೆ ಮತ್ತು ಶುದ್ಧವಾಗಿರಲಿದೆ. ತೈಲ ರಿಫೈನರೀಸ್ ಸಂಸ್ಥೆಗಳು ಬಿಎಸ್-6 ದರ್ಜೆಗೆ ಪರಿವರ್ತಿಸುವ ಕಾರ್ಯಕ್ಕೆ ಭಾರೀ ಮೊತ್ತವನ್ನು ವಿನಿಯೋಗಿಸಿದೆ. ನವೀಕರಣ ಪ್ರಕ್ರಿಯೆಗೆ ಐಒಸಿ ಸುಮಾರು 17,000 ಕೋಟಿ ರೂ. ವೆಚ್ಚ ಮಾಡಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಸುಮಾರು 7,000 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಹೇಳಿಕೆ ನೀಡಿದೆ.
ಆದರೆ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ವಿನಿಯೋಗಿಸಿದ ಮೊತ್ತದ ವಿವರ ನೀಡಿಲ್ಲವಾದರೂ ಎಪ್ರಿಲ್ 1ರ ಗಡುವಿನ ಒಳಗೆ ಬಿಎಸ್-6 ದರ್ಜೆಗೆ ಪರಿವರ್ತಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ. ಬಿಎಸ್-6 ದರ್ಜೆಗೆ ಉನ್ನತೀಕರಿಸುವ ವೆಚ್ಚ ಅಧಿಕವಾಗಿದ್ದರೂ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಅಲ್ಪಪ್ರಮಾಣದಲ್ಲಿ ತೈಲ ದರ ಹೆಚ್ಚಿಸಲಾಗುವುದು ಎಂದು ತೈಲಸಂಸ್ಥೆಗಳು ಹೇಳಿವೆ.







