200 ಪೊಲೀಸರಿದ್ದರೆ , ಅವರು ಸಾವಿರ ಸಂಖ್ಯೆಯಲ್ಲಿದ್ದರು: ದಿಲ್ಲಿ ಹಿಂಸಾಚಾರದಲ್ಲಿ ಗಾಯಗೊಂಡ ಎಸಿಪಿ ಹೇಳಿಕೆ

ಹೊಸದಿಲ್ಲಿ, ಫೆ.29: ಪೊಲೀಸರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಕಾರಣ ದಿಲ್ಲಿ ಹಿಂಸಾಚಾರದ ಸಂದರ್ಭ ಉದ್ರಿಕ್ತ ಗುಂಪು ದಾಂಧಲೆಯಲ್ಲಿ ತೊಡಗಿದ್ದರೂ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಪೊಲೀಸ್ ಉಪ ಆಯುಕ್ತ ಅನುಜ್ ಕುಮಾರ್ ಹೇಳಿದ್ದಾರೆ.
ಗಾಝಿಯಾಬಾದ್ ಗಡಿ ಮತ್ತು ಸಿಗ್ನೇಚರ್ ಸೇತುವೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಿರುವ ತಡೆಯನ್ನು ತೆಗೆದುಹಾಕಲು ನಮಗೆ ಸೂಚನೆ ಬಂದಿತ್ತು. ಆದರೆ ಕ್ರಮೇಣ ಅಲ್ಲಿ ಸೇರಿದ್ದ ಜನರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ನಾವು ಕೇವಲ 200 ಮಂದಿಯಿದ್ದರೆ ಅವರು ಸುಮಾರು 25,000 ಜನರಿದ್ದರು. ರಸ್ತೆಯನ್ನು ತಡೆಯಲು ಅವರು ಪೂರ್ವನಿರ್ಧರಿತರಾಗಿಯೇ ಬಂದಿದ್ದರೇ ಎಂಬುದು ತನಗೆ ತಿಳಿದಿಲ್ಲ ಎಂದು ಅನುಜ್ ಕುಮಾರ್ ಹೇಳಿದ್ದಾರೆ.
ಹಿಂಸಾಚಾರದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಮಾರ್ ಗುರುವಾರ ಬಿಡುಗಡೆಗೊಂಡಿದ್ದಾರೆ. ಗುಂಪು ಸೇರಿದ್ದವರಲ್ಲಿ ಶಾಂತರೀತಿಯಲ್ಲಿ ಮಾತನಾಡಿ, ಮುಖ್ಯ ರಸ್ತೆ ಬಿಟ್ಟು ಪಕ್ಕದ ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಮನವೊಲಿಸಲು ಮುಂದಾದೆವು. ಆಗ , ಪೊಲೀಸ್ ಶೂಟೌಟ್‌ನಲ್ಲಿ ಕೆಲವು ಮಕ್ಕಳು ಮತ್ತು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿತು. ರಸ್ತೆಯ ಕೆಳಗೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಕಲ್ಲು ಮತ್ತು ಇಟ್ಟಿಗೆಯನ್ನು ರಾಶಿ ಹಾಕಲಾಗಿತ್ತು. ಪ್ರತಿಭಟನಾಕಾರರು ಏಕಾಏಕಿ ಕಲ್ಲು ಮತ್ತು ಇಟ್ಟಿಗೆ ಎಸೆಯತೊಡಗಿದಾಗ ಪೊಲೀಸರು ಗಾಯಗೊಂಡರು ಎಂದು ಕುಮಾರ್ ವಿವರಿಸಿದ್ದಾರೆ.
ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಯಿತು. ಪ್ರತಿಭಟನಾಕಾರರಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ನಮಗೆ ಗುಂಡು ಹಾರಿಸಲು ಆಗಲಿಲ್ಲ. ಅಷ್ಟರಲ್ಲೇ ಪ್ರತಿಭಟನಾಕಾರರ ಕೈ ಮೇಲಾಯಿತು. ಡಿಸಿಪಿ ಕಲ್ಲೇಟಿನಿಂದ ತೀವ್ರ ಗಾಯಗೊಂಡಿದ್ದರು. ಅವರನ್ನು ಅಲ್ಲಿಂದ ಮೊದಲು ತೆರವುಗೊಳಿಸಬೇಕಿತ್ತು ಎಂದು ಕುಮಾರ್ ಹೇಳಿದ್ದಾರೆ. ಇಲ್ಲಿ ನಡೆದ ಕಲ್ಲೆಸೆತದಲ್ಲಿ ತೀವ್ರ ಗಾಯಗೊಂಡಿದ್ದ ಪೊಲೀಸ್ ಕಾನ್‌ಸ್ಟೇಬಲ್ ರತನ್ ಲಾಲ್ ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಡಿಸಿಪಿ, ಎಸಿಪಿ ಸೇರಿದಂತೆ ಕನಿಷ್ಟ 11 ಪೊಲೀಸರು , 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸರಕಾರ ತಿಳಿಸಿದೆ.







