ಕಳ್ಳರು, ಅಪರಾಧಿಗಳು, ನಮಗಿಂತ ಮುಂದು: ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್

ಬೆಂಗಳೂರು, ಫೆ.29: ಇತ್ತೀಚಿನ ದಿನಗಳಲ್ಲಿ ಕಳ್ಳರು ಮತ್ತು ಅಪರಾಧಿಗಳು ನಮಗಿಂತಲೂ ತುಂಬಾ ಮುಂದಿದ್ದು, ಅವರನ್ನು ಸೆರೆಹಿಡಿಯಬೇಕಾದರೆ ನಾವು ಅವರಿಗಿಂತಲೂ ಹೆಚ್ಚಿನ ನೈಪುಣ್ಯ ಪಡೆಯಬೇಕಾದ ಅಗತ್ಯವಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಶನಿವಾರ ನಗರದ ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಆಯೋಜಿಸಿದ್ದ, 4ನೇ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಹತ್ತು ವರ್ಷಗಳಲ್ಲಿ ಬಹುಶಃ ಸರಗಳ್ಳತನ, ಹಗಲು ಮತ್ತು ರಾತ್ರಿ ದರೋಡೆ ಮತ್ತಿತರ ಕೃತ್ಯಗಳನ್ನು ಕಷ್ಟಪಟ್ಟು ಮಾಡುವುದರ ಬದಲು ಮನೆಯಲ್ಲೇ ಕುಳಿತು ಸೈಬರ್ ಕ್ರೈಂನಿಂದ ಲಕ್ಷಾಂತರ ಹಣವನ್ನು ವಂಚನೆಮಾಡುವ ಸಾಧ್ಯತೆ ಇದ್ದು, ಇಂತಹ ಪ್ರಕರಣಗಳನ್ನು ಭೇದಿಸಲು ಹೆಚ್ಚಿನ ನೈಪುಣ್ಯತೆ ಸಂಪಾದಿಸಬೇಕೆಂದರು.
ಮುಂದಿನ ದಿನಗಳಲ್ಲಿ ಪೊಲೀಸರು ಯಶಸ್ವಿಯಾಗಿ ತನಿಖೆ ಮಾಡಬೇಕಾದರೆ ತಾಂತ್ರಿಕವಾದ ವಿಧಾನಗಳ ಮೂಲಕ ಮಾಹಿತಿ ಸಂಗ್ರಹಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಇಂತಹ ಕರ್ತವ್ಯಕೂಟ ತುಂಬಾ ಮುಖ್ಯವಾಗಿದ್ದು, ಇದು ಕೇವಲ ತಂಡದ ಆಯ್ಕೆಗೆ ಮಾತ್ರ ಸೀಮಿತವಾಗಿರದೆ, ಇಲ್ಲಿಂದ ನಿಮ್ಮ ಜಿಲ್ಲೆ ಮತ್ತು ವಲಯಗಳಿಗೆ ತೆರಳಿದ ನಂತರ ಇಲ್ಲಿ ಕಲಿತಿರುವ ಪರಿಣಿತಿ ಮತ್ತು ಕೌಶಲ್ಯವನ್ನು ತನಿಖೆಯಲ್ಲಿ ಉಪಯೋಗಿಸಿ ಯಶಸ್ಸು ಸಾಧಿಸಿದರೆ ಈ ಕರ್ತವ್ಯಕೂಟಕ್ಕೆ ಪೂರ್ಣಫಲ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಅದೇ ರೀತಿ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಗೆ ವೈಜ್ಞಾನಿಕ ತನಿಖೆಯ ಮಾಹಿತಿಗಳನ್ನು ಅಗತ್ಯವಾಗಿ ಒದಗಿಸಬೇಕಾಗಿರುವುದರಿಂದ ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ಪ್ರಶಂಸನಾ ಪತ್ರ ಪ್ರದಾನ: ಈ ಕೂಟದಲ್ಲಿ ರಾಜ್ಯದಾದ್ಯಂತ 350 ಜನ ಭಾಗವಹಿಸಿದ್ದರು. ಪೊಲೀಸ್ ಫೋಟೋಗ್ರಫಿ, ವಿಡಿಯೋಗ್ರಫಿ, ಆಂಟಿ ಸಬೋಟೇಜ್ ಚೆಕ್, ಕಂಪ್ಯೂಟರ್ ಅರಿವು ಬೆರಳಚ್ಚು ವಿಭಾಗಗಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಂಸನಾ ಪತ್ರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಪರಶಿವಮೂರ್ತಿ, ಎಫ್‌ಎಸ್‌ಎಲ್ ನಿರ್ದೇಶಕ ನಾಯಕ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.








