ಆನೆದಂತ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ

ಚಿಕ್ಕಮಗಳೂರು, ಫೆ.29: ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಆರೋಪದ ಮೇರೆಗೆ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶೃಂಗೇರಿ ತಾಲೂಕಿನ ಶಬರೀಶ್, ವಿಜಯ್, ಯೋಗೀಶ್, ಮಧುಸೂದನ್ ಬಂಧಿತ ಆರೋಪಿಗಳಾಗಿದ್ದು, ಶುಕ್ರವಾರ ರಾತ್ರಿ ಕಾರೊಂದರಲ್ಲಿ ಆನೆ ದಂತವನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಸವನಹಳ್ಳಿ ಠಾಣೆಯ ಪೊಲೀಸರು ನಗರ ಸಮೀಪದ ಮೂಗ್ತಿಹಳ್ಳಿ ಎಂಬಲ್ಲಿ ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಆನೆದಂತ ಸಾಗಣೆಗೆ ಬಳಸಿದ್ದ ಸೆಲೆರಿಯೋ ಕಾರು ಆನೆದಂತ ಹಾಗೂ ಐದು ಲಕ್ಷ ರೂ. ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿದ್ದು, ಪೊಲೀಸರ ಕಣ್ತಪ್ಪಿಸಿ ದಂತವನ್ನು ಮಾರಾಟ ಮಾಡಬಹುದೆಂದು ಪ್ಲಾನ್ ರೂಪಿಸಿದ್ದ ಆರೋಪಿಗಳು ರಾತ್ರಿ 7:30ರ ಸುಮಾರಿಗೆ ಚಿಕ್ಕಮಗಳೂರಿಗೆ ಆಗಮಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.
ಶಬರೀಶ್ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಐಟಿಸೆಲ್ ಮುಖ್ಯಸ್ಥನಾಗಿದ್ದ ಎನ್ನಲಾಗುತ್ತಿದೆ. ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳ ಪಾರ್ಕಿಂಗ್‍ಗೆ ಶುಕ್ರವಾರ ಪಟ್ಟಣ ಪಂಚಾಯತ್ ಹರಾಜು ನಡೆಸಿತ್ತು. ಆ ಹರಾಜಿನಲ್ಲಿ ಶಬರೀಶ್ ಭಾಗವಹಿಸಿ ನಂತರ ಮೂವರು ಸ್ನೇಹಿತರೊಂದಿಗೆ ಆನೆದಂತ ಹಾಗೂ ಐದು ಲಕ್ಷದೊಂದಿಗೆ ಕಾರಿನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅನುಮಾನಗೊಂಡ ಪೊಲೀಸರು ಕಾರು ಪರಿಶೀಲನೆ ನಡೆಸಿದ ವೇಳೆ ಆನೆದಂತ ಮತ್ತು ಐದು ಲಕ್ಷ ರೂ. ನಗದು ಇರುವುದು ತಿಳಿದುಬಂದಿದ್ದು, ನಾಲ್ವರು ಆರೋಪಿಗಳನ್ನು ಬಂದಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.jpg)







