ಚೀನಿ ವಸ್ತುಗಳಿಗೆ ಪರ್ಯಾಯ: ಭಾರತದ ತೀವ್ರ ಪ್ರಯತ್ನ

ಹೊಸದಿಲ್ಲಿ: ಕೊರೋನಾ ವೈರಸ್ ದಾಳಿಯಿಂದ ತತ್ತರಿಸಿರುವ ಚೀನಾದಿಂದ ಆಮದಾಗುತ್ತಿರುವ ಜವಳಿ, ಸಿದ್ಧ ಉಡುಪು, ರೆಫ್ರಿಜರೇಟರ್, ಸೂಟ್‌ಕೇಸ್, ಆ್ಯಂಟಿ ಬಯಾಟಿಕ್ಸ್, ವೈದ್ಯಕೀಯ ಸಾಧನಗಳು ಸೇರಿದಂತೆ 1050ಕ್ಕೂ ಹೆಚ್ಚು ವಸ್ತುಗಳಿಗೆ ಪರ್ಯಾಯ ಹುಡುಕುವ ಪ್ರಯತ್ನದಲ್ಲಿ ಭಾರತ ತೊಡಗಿದೆ.
ಭಾರತಕ್ಕೆ ಆಮದಾಗುವ ಒಟ್ಟು ಉತ್ಪನ್ನಗಳ ಪೈಕಿ ಚೀನಾದ ಪಾಲು ಶೇಕಡ 50 ಆಗಿದ್ದು, ಪರ್ಯಾಯ ಶೋಧಕ್ಕೆ ಭಾರತ ಇದೀಗ ಆದ್ಯತೆ ನೀಡಿದೆ.
ಚೀನಾದಿಂದ ಆಮದಾಗುವ ವಸ್ತುಗಳ ಪಟ್ಟಿಯಲ್ಲಿ ಆಟೊಮ್ಯಾಟಿಕ್ ಡಾಟಾ ಪ್ರೊಸೆಸಿಂಗ್ ಮಿಷಿನ್, ಡಯೋಡ್, ಸೆಮಿಕಂಡಕ್ಟರ್ ಸಾಧನಗಳು, ವಾಹನದ ಬಿಡಿಭಾಗಗಳು ಮತ್ತು ಹಲವು ಉಕ್ಕು ಮತ್ತು ಅಲ್ಯೂಮೀನಿಯಂ ಸಾಧನಗಳು, ಮೊಬೈಲ್ ಫೋನ್‌ಗಳು ಸೇರಿವೆ.
ವಾಣಿಜ್ಯ ಇಲಾಖೆ ಈಗಾಗಲೇ ಒಂದು ಸುತ್ತಿನ ಸಲಹಾ ಸಭೆ ನಡೆಸಿದ್ದು, ವಿಶ್ವಾದ್ಯಂತ ಇರುವ ಭಾರತೀಯ ಮಿಷನ್‌ಗಳಿಗೆ ಪತ್ರ ಬರೆದು ಸಂಭಾವ್ಯ ಪೂರೈಕೆದಾರರ ಪಟ್ಟಿ ಮಾಡುವಂತೆ ಸೂಚಿಸಿದೆ. ಸಂಭಾವ್ಯ ಪರ್ಯಾಯ ಮಾರುಕಟ್ಟೆಗಳ ಬಗೆಗಿನ ವಿಶ್ಲೇಷಣೆಯನ್ನು ಕೂಡಾ ಇಲಾಖೆ ನಡೆಸಿದ್ದು, ಇದನ್ನು ಈಗಾಗಲೇ ಹಲವು ಸಚಿವಾಲಯಗಳು ಮತ್ತು ವಿದೇಶಿ ಮಿಷಿನ್‌ಗಳ ಜತೆ ಹಂಚಿಕೊಂಡಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಎಲೆಕ್ಟ್ರಿಕಲ್ ಯಂತ್ರೋಪಕರಣಗಳಿಗೆ ಬ್ರೆಝಿಲ್, ಭಾರತ ಮತ್ತು ವಿಯೇಟ್ನಾಂ, ಪ್ಲಾಸ್ಟಿಕ್‌ಗೆ ಮೆಕ್ಸಿಕೊ ಹಾಗೂ ಬ್ರೆಝಿಲ್, ಪೀಠೋಪಕರಣ ಮತ್ತು ಬಿಡಿಭಾಗಗಳಿಗೆ ಮೆಕ್ಸಿಕೊ, ವಾಹನ ಬಿಡಿಭಾಗಕ್ಕೆ ಚಿಲಿ, ಕೊಲಂಬಿಯಾ ಮತ್ತು ಭಾರತ, ಸಿದ್ಧ ಉಡುಪುಗಳಿಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭಾರತ, ಕನ್ನಡಕ, ವೈದ್ಯಕೀಯ, ಶಸ್ತ್ರಚಿಕಿತ್ಸಾ ಸಾಧನಗಳಿಗೆ ಕೊಲಂಬಿಯಾ, ಬ್ರೆಝಿಲ್ ಮತ್ತು ಭಾರತ, ಆಟಿಕೆಗಳಿಗೆ ಮೆಕ್ಸಿಕೋ ಹಾಗೂ ಬ್ರೆಝಿಲ್ ದೇಶಗಳಲ್ಲಿ ಸಂಭಾವ್ಯ ಪೂರೈಕೆದಾರರು ಸಿಗಲಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ.
ಈ ಕುರಿತ ಸಮಗ್ರ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಸದ್ಯದಲ್ಲೇ ಉನ್ನತ ಮಟ್ಟದ ಸಲಹಾ ಸಭೆ ನಡೆಸಲಿದ್ದಾರೆ. ಸಾಧ್ಯವಿರುವ ವಲಯಗಳಲ್ಲಿ ದೇಶೀಯ ಉತ್ಪಾದನೆಗೆ ಒತ್ತು ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.







