ಜೈಲಿನಲ್ಲಿರುವ ಡಾ.ಕಫೀಲ್ ಖಾನ್ ಜೀವ ಅಪಾಯದಲ್ಲಿ: ಹೈಕೋರ್ಟ್ ಗೆ ಪತ್ನಿಯ ಪತ್ರ
"ಜೈಲಿನಲ್ಲಿ ಸತತ 5 ದಿನಗಳ ಕಾಲ ಆಹಾರ ನೀಡಿಲ್ಲ"

ಲಕ್ನೋ,ಮಾ.1: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಲಿಗಢ ಮುಸ್ಲಿಮ್ ವಿವಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪದಲ್ಲಿ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿ ಮಥುರಾ ಜೈಲಿನಲ್ಲಿರುವ ಡಾ.ಕಫೀಲ್ ಖಾನ್ ಅವರಿಗೆ ಜೀವಭಯವಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಲಿಖಿತ ಪತ್ರದಲ್ಲಿ ತಿಳಿಸಿರುವ ಅವರ ಪತ್ನಿ ಶಬಿಸ್ತಾ ಖಾನ್ ಅವರು,ತನ್ನ ಪತಿಗೆ ರಕ್ಷಣೆಯನ್ನು ಒದಗಿಸುವಂತೆ ಕೋರಿದ್ದಾರೆ.
‘ನಾನು ಇತ್ತೀಚಿಗೆ ಮಥುರಾ ಜೈಲಿನಲ್ಲಿ ಪತಿಯನ್ನು ಭೇಟಿಯಾದಾಗ ಅವರು ತುಂಬ ಹೀನಸ್ಥಿತಿಯಲ್ಲಿದ್ದರು. ಜೈಲಿಗೆ ತಳ್ಳಿದ ಬಳಿಕ ನಿರಂತರ ಐದು ದಿನಗಳ ಕಾಲ ತನಗೆ ಆಹಾರವನ್ನು ನೀಡಿರಲಿಲ್ಲ ಎಂದು ಅವರು ತನಗೆ ತಿಳಿಸಿದ್ದಾರೆ. ಅವರನ್ನು ಅತ್ಯಂತ ಸಣ್ಣ ಬ್ಯಾರಕ್‌ನಲ್ಲಿರಿಸಲಾಗಿದೆ ಮತ್ತು ಸುಮಾರು 100-150 ಇತರ ಕೈದಿಗಳೂ ಅಲ್ಲಿದ್ದಾರೆ. ಅಲ್ಲಿ ಅವರ ಜೀವಕ್ಕೆ ಅಪಾಯವಿರಬಹುದು ’ ಎಂದು ಹಿರಿಯ ಜೈಲು ಅಧಿಕಾರಿಗಳಿಗೂ ಕಳುಹಿಸಿರುವ ಪತ್ರದಲ್ಲಿ ಶಾಬಿಸ್ತಾ ತಿಳಿಸಿದ್ದಾರೆ.
ಜೈಲಿನಲ್ಲಿ ಡಾ.ಖಾನ್ ಅವರಿಗೆ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಮತ್ತು ಅವರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ತನ್ನ ಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿರುವ ಶಾಬಿಸ್ತಾ,ಅವರ ಜೀವದ ಬಗ್ಗೆ ತನಗೆ ಭೀತಿಯಿದೆ ಎಂದಿದ್ದಾರೆ. ಅವರನ್ನು ಅಪರಾಧಿಗಳಿಂದ ಬೇರ್ಪಡಿಸಿ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆಯೂ ಆಗ್ರಹಿಸಿದ್ದಾರೆ.
ಜ.29ರಂದು ಬಂಧಿಸಲ್ಪಟ್ಟಿದ್ದ ಡಾ.ಖಾನ್‌ಗೆ ಅಲಿಗಡದ ನ್ಯಾಯಾಲಯವು ಫೆ.10ರಂದು ಜಾಮೀನು ನೀಡಿತ್ತು. ಆದರೆ ಅವರನ್ನು ಮಥುರಾ ಜೈಲಿನಿಂದ ಬಿಡುಗಡೆಗೊಳಿಸಲಾಗಿಲ್ಲ.







