ತೊಕ್ಕೊಟ್ಟು: ಮದುವೆ ಹಾಲ್‌ನಲ್ಲಿ ಅವಘಡ ; ಓರ್ವ ಮೃತ್ಯು

ಮಂಗಳೂರು, ಮಾ.1: ರಾ.ಹೆ. 66ರ ಕಲ್ಲಾಪು ಸಮೀಪದ ಮದುವೆ ಹಾಲ್ ಒಂದರಲ್ಲಿ ಸಂಭವಿಸಿದ ಅವಘಡದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ನಡೆದಿದೆ.
ತುಂಬೆ ಸಮೀಪದ ವಳವೂರಿನ ಹಂಝ (30) ಮೃತಪಟ್ಟವರು. ಇವರು ಕುದ್ರೋಳಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ.
ರವಿವಾರ ಈ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಕ್ಯಾಟರಿಂಗ್ ಕೆಲಸ ಮಾಡಲು ಹಂಝ ಅವರು ಹೋಗಿದ್ದು, ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಹಾಲ್‌ನ ಮೂರನೇ ಮಹಡಿಯಿಂದ ಸಾಮಗ್ರಿಗಳನ್ನು ಲಿಫ್ಟ್‌ನಲ್ಲಿ ಹಾಕಿ ಕೆಳಗೆ ಬರಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಲಿಫ್ಟ್‌ನ ರೋಪ್ ಸಡಿಲಗೊಂಡಿದ್ದು, ಆಯ ತಪ್ಪಿದ ಹಂಝ ಅವರು ಲಿಫ್ಟ್‌ನೊಳಗೆ ಸಿಲುಕಿ ಬಿದ್ದರು ಎನ್ನಲಾಗಿದೆ. ಇದರಿಂದ ಗಾಯಗೊಂಡ ಹಂಝ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಮೃತ ಹಂಝ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
Next Story







