ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ: ಹೈಕೋರ್ಟ್

ಬೆಂಗಳೂರು, ಮಾ.1: ಮಕ್ಕಳ ಪೋಷಣೆ ಅಜ್ಜ, ಅಜ್ಜಿಗಿಂತಲೂ ತಂದೆ -ತಾಯಿಯ ಪಾತ್ರವೇ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಜ್ಜ, ಅಜ್ಜಿಯ ಆಶ್ರಯದಲ್ಲಿದ್ದ 8 ವರ್ಷದ ಬಾಲಕಿಯನ್ನು ತಂದೆಯ ಬಳಿಗೆ ಸೇರಿಸಿದೆ.
ತಂದೆಯ ಪೋಷಣೆಯಲ್ಲಿಯೇ ಮಗಳು ಬೆಳೆಯಬೇಕೆಂದು ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿರುವುದನ್ನು ಪ್ರಶ್ನಿಸಿ ಅತ್ತೆ, ಮಾವ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ಅಜ್ಜಿ, ತಾತನಿಗೆ ಮೊಮ್ಮಕ್ಕಳ ಮೇಲಿರುವ ಹಕ್ಕನ್ನು ಕಡೆಗಣಿಸುವಂತಿಲ್ಲ. ಆದರೆ, ಮಕ್ಕಳ ಪೋಷಣೆಯಲ್ಲಿ ತಂದೆ, ತಾಯಿಯ ಜವಾಬ್ದಾರಿ ಹೆಚ್ಚಿರುತ್ತದೆ. ಹೆಣ್ಣು ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ ಪಾತ್ರ ಬಹುಮುಖ್ಯ. ತಂದೆ ಮತ್ತು ಮಗಳ ನಡುವೆ ಅಂತರ ಸೃಷ್ಟಿಯಾಗಲು ಬಿಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಲಕಿಯ ಆಸ್ತಿಗೆ ತಂದೆಯನ್ನು ಕಾನೂನುಬದ್ಧ ಪೊಷಕನೆಂದು ಘೊಷಿಸಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿರುವ ವೃದ್ಧ ದಂಪತಿಗೆ ಆ ನೊವು ಹೊಗಲಾಡಿಸಲು ಇರುವ ಏಕೈಕ ದಾರಿ ಎಂದರೆ ಮೊಮ್ಮಗಳ ಪ್ರಿತಿ ಮಾತ್ರ. ಹೀಗಾಗಿ ಬಾಲಕಿಯನ್ನು ಕಾಲಕಾಲಕ್ಕೆ ಭೇಟಿಯಾಗಲು ಪರಸ್ಪರ ಮಾತುಕತೆ ಮೂಲಕ ತೀರ್ಮಾನಕ್ಕೆ ಬರುವಂತೆ ಪಾಲಕರು ಹಾಗೂ ಅಜ್ಜಿ, ತಾತನಿಗೆ ಸೂಚಿಸಿದೆ.
ವಿಚಾರಣೆ ವೇಳೆ ಬಾಲಕಿಯ ತಂದೆ ಎರಡನೆ ಮದುವೆಯಾಗಿರುವ ವಿಚಾರ ಮನಗಂಡ ನ್ಯಾಯಮೂರ್ತಿಗಳು, ದಂಪತಿಯನ್ನು ತಮ್ಮ ಕೊಠಡಿಗೆ ಕರೆಸಿ ಸಮಾಲೊಚನೆ ನಡೆಸಿದರು. ತನ್ನ ಎರಡನೆ ಪತ್ನಿ ಗರ್ಭ ಧರಿಸಲಾಗದ ವಿಚಾರವನ್ನು ಅವರು ತಿಳಿಸಿದರು. ಬಾಲಕಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ದಂಪತಿ ಭರವಸೆ ನೀಡಿದರು. ಈ ಕುರಿತು ತೀರ್ಪಿನಲ್ಲಿ ವಿವರಿಸಿರುವ ನ್ಯಾಯಾಲಯ, ಎರಡನೇ ಪತ್ನಿ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಪತಿ ತಿಳಿಸಿದ್ದಾರೆ. ಇದರಿಂದ ಎರಡನೇ ಪತ್ನಿಗೆ ಮಕ್ಕಳಾದರೆ ತಮ್ಮ ಮೊಮ್ಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಹುದು ಎಂದು ಅರ್ಜಿದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.







