‘ಪರೀಕ್ಷೆ ಸಿದ್ಧತೆಗೆ ಪುಸ್ತಕಗಳಿಲ್ಲ’: ಹಿಂಸಾಗ್ರಸ್ತ ದಿಲ್ಲಿಯ ವಿದ್ಯಾರ್ಥಿಗಳ ಅಳಲು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮಾ.1: ಈಶಾನ್ಯ ದಿಲ್ಲಿಯ ಹಿಂಸಾಗ್ರಸ್ತ ಪ್ರದೇಶಗಳಲ್ಲಿಯ ವಿದ್ಯಾರ್ಥಿ ಗಳು ಸಿಬಿಎಸ್ಇ ಪರೀಕ್ಷೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೆ ಹತಾಶ ಸ್ಥಿತಿಯಲ್ಲಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಿಂಸಾಚಾರ ಸಂದರ್ಭ ಜೀವವುಳಿಸಿಕೊಳ್ಳಲು ತಮ್ಮ ಮನೆಗಳನ್ನು ಅನಿವಾರ್ಯವಾಗಿ ತೊರೆದಿದ್ದು ಅವರ ಬಳಿ ಪುಸ್ತಕಗಳಿಲ್ಲ,ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳೂ ಇಲ್ಲ.
ಹಿಂಸಾಗ್ರಸ್ತ ಪ್ರದೇಶಗಳಲ್ಲಿ ನಿಗದಿಯಾಗಿರುವಂತೆ ಸೋಮವಾರದಿಂದ 10 ಮತ್ತು 12ನೇ ತರಗತಿ ಪರೀಕ್ಷೆಗಳು ಆರಂಭಗೊಳ್ಳಲಿವೆ ಎಂದು ಸಿಬಿಎಸ್ಇ ಶನಿವಾರ ತಿಳಿಸಿದೆ. ಈ ಸಮಯದಲ್ಲಿ ಸಿಬಿಎಸ್ಇ ಪರೀಕ್ಷಾ ಕೇಂದ್ರಗಳ ಸ್ಥಳಾಂತರ ಕಾರ್ಯಸಾಧ್ಯ ಆಯ್ಕೆಯಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಹಿಂಸಾಚಾರದಿಂದ ಪಾರಾಗಲು ಮನೆಯನ್ನು ತೊರೆದಿದ್ದ ಶಿವ ವಿಹಾರ ನಿವಾಸಿ ಮುಹಮ್ಮದ್ ಸಮೀರ್ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಗುಂಪು ದಾಳಿ ನಡೆಸಿದ ಸಂದರ್ಭ ಚಪ್ಪಲಿಯನ್ನು ಧರಿಸಲೂ ತನಗೆ ಸಮಯವಿರಲಿಲ್ಲ. ಶನಿವಾರ ತನಗೆ ಪರೀಕ್ಷೆಯಿತ್ತಾದರೂ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪರೀಕ್ಷೆಗೆ ಓದಿಕೊಳ್ಳಲು ತನ್ನ ಬಳಿ ಪುಸ್ತಕಗಳೂ ಇಲ್ಲ ಎಂದು ಆತ ಸುದ್ದಿಗಾರರಿಗೆ ತಿಳಿಸಿದ.
10ನೇ ತರಗತಿಯ ಇನ್ನೋರ್ವ ವಿದ್ಯಾರ್ಥಿ ರಾಹುಲ್ ಗಿರಿ ಗುಂಪೊಂದು ನಡೆಸಿದ ಆ್ಯಸಿಡ್ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನಿನ್ನೂ ಆಘಾತದಿಂದ ಹೊರಕ್ಕೆ ಬಂದಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದರು.
ಬೆಂಕಿ ಹಚ್ಚುವಿಕೆ, ಗುಂಪು ದಾಳಿಗಳ ಸಂದರ್ಭ ತನ್ನಂತೆಯೇ ಹಲವಾರು ವಿದ್ಯಾರ್ಥಿಗಳು ವೈಯಕ್ತಿಕ ಸೊತ್ತುಗಳನ್ನೂ ತೆಗೆದುಕೊಳ್ಳಲು ಸಾಧ್ಯವಾಗದೆ ಮನೆಗಳನ್ನು ಬಿಟ್ಟಿದ್ದರು. ಕಳೆದ ವಾರದವರೆಗೆ ಮಾತ್ರ ತಾನು ಓದಿಕೊಂಡಿದ್ದೆ. ಆದರೆ ಹಿಂಸಾಚಾರ ಭುಗಿಲೆದ್ದಾಗ ಎಲ್ಲವೂ ಸ್ತಬ್ಧಗೊಂಡಿತ್ತು. ತಾನು ಪರೀಕ್ಷೆಗೆ ಸಿದ್ಧಗೊಳ್ಳಲು ಸಾಧ್ಯವಾಗಿಲ್ಲ, ಏನಾಗುತ್ತದೆಯೋ ಗೊತ್ತಿಲ್ಲ ಎಂದು 12ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ತಿಳಿಸಿದಳು.
ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಿಬಿಎಸ್ಇ ಅವಕಾಶ ಒದಗಿಸಿದೆಯಾದರೂ,ಈ ಸಮಯದಲ್ಲಿ ಅದು ಅನುಕೂಲಕರವಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.







