ಮಂಗಳೂರು: ಪ್ರಕೃತಿ ಮಡಿಲಲ್ಲೇ ರಾಜ್ಯ ಮಟ್ಟದ ಪರಿಸರ ಸಮ್ಮೇಳನ

ಮಂಗಳೂರು, ಮಾ.1: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ (ಎನ್‌ಇಸಿಎಫ್) ‘ಪ್ರಕೃತಿ ಮಾತೆಯ ರೋದನಕ್ಕೆ ಕಿವಿಯಾಗೋಣ’ ಘೋಷವಾಕ್ಯದಡಿ ಎರಡನೇ ರಾಜ್ಯ ಮಟ್ಟದ ‘ಪರಿಸರ ಸಮ್ಮೇಳನ’ವು ತಣ್ಣೀರುಬಾವಿ ಕಡಲತೀರದ ಟ್ರೀಪಾರ್ಕ್‌ನ ಪ್ರಕೃತಿಯ ಮಡಿಲಲ್ಲಿ ರವಿವಾರ ದಿನಪೂರ್ತಿ ನಡೆಯಿತು.
ಶಿವಮೊಗ್ಗ, ಹಾಸನ, ತುಮಕೂರು, ಬೆಂಗಳೂರು, ಉತ್ತರಕನ್ನಡ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಪರಿಸರಾಸಕ್ತರು ಆಗಮಿಸಿ ಸಮ್ಮೇಳನಕ್ಕೆ ಮೆರುಗು ನೀಡಿದರು. ಬೆಳಗ್ಗೆ 8 ಗಂಟೆಯಿಂದಲೇ ಚಿಣ್ಣರಿಂದ ಹಿಡಿದು ಹಿರಿಯರು ಟ್ರೀಪಾರ್ಕ್‌ನತ್ತ ಆಗಮಿಸಿ, ನೋಂದಣಿ ಮಾಡಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಇಎಂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯದಲ್ಲಿ ಗ್ರಾಮೀಣ ಆಟಗಳ ಕುರಿತು ನೃತ್ಯ ಪ್ರದರ್ಶಿಸಿದರು. ಸಿದ್ಧಿ ಸಮುದಾಯದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕೊಪ್ಪ ತಂಡ ದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು. ಸಮ್ಮೇಳಕ್ಕೆ ಮೊದಲು ಹಾಲಕ್ಕಿ ಸಮುದಾಯದವರಿಂದ ಪದ್ಮಶ್ರೀ ಸುಕ್ರೀ ಬೊಮ್ಮಗೌಡ ಅವರ ನೇತೃತ್ವದಲ್ಲಿ ನೃತ್ಯ ಪ್ರದರ್ಶನಗೊಂಡಿತು.
ಚಿತ್ರ ಕಲಾವಿದರು ತಂಡ ಸ್ಥಳದಲ್ಲೇ ಪರಿಸರಕ್ಕೆ ಸಂಬಂಧಿಸಿದ ಚಿತ್ರರಚಿಸಿ ಸಮ್ಮೇಳನಕ್ಕೆ ಮೆರುಗು ನೀಡಿದರು. ಮೀನು, ಹಕ್ಕಿಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರುವ ಕಲಾಕೃತಿಗಳನ್ನು ಸ್ಥಳದಲ್ಲಿ ಇರಿಸಲಾಗಿತ್ತು.
ಬೆಳೆದು ನಿಂತ ಮರಗಿಡಗಳ ನೆರಳೇ ಚಪ್ಪರ, ಶಾಮಿಯಾನವಾಗಿತ್ತು. ತೆರೆದ ವೇದಿಕೆಯಲ್ಲಿ ನ್ಯಾಯಾಲಯ ಪ್ರಕ್ರಿಯೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ರಥಬೀದಿಯ ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಚಿತ್ರಗಳನ್ನು ರಚಿಸಿದರು.
ವಿವಿಧ ಜಾತಿಯ ಗಿಡಗಳ ಮಾರಾಟ ಮತ್ತು ಪ್ರದರ್ಶನವಿತ್ತು. ಹಾಳೆತಟ್ಟೆಯಲ್ಲಿ ತುಳಸೀಗೌಡ, ಸುಕ್ರೀ ಬೊಮ್ಮಗೌಡ ಭಾವಚಿತ್ರಗಳನ್ನು ತೂಗಿ ಹಾಕಲಾಗಿತ್ತು. ಎತ್ತಿನಹೊಳೆ ಯೋಜನೆಯನ್ನು ಅಣಕಿಸುವ ಕಲಾಕೃತಿಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಚಿತ್ರಕಲಾವಿದರ ಕೈಚಳಕ: ಚಾವಡಿ ಕಲಾವಿದರು ತಂಡ ಸ್ಥಳದಲ್ಲೇ ಚಿತ್ರರಚಿಸಿ, ಪ್ರದರ್ಶನ ನೀಡಿದರು. ಚಿತ್ರ ಕಲಾಶಿಕ್ಷಕರಾದ ಜಾನ್‌ಚಂದ್ರನ್, ಪೂರ್ಣೇಶ್, ತಾರಾನಾಥ್ ಕೈರಂಗಳ ಈ ಚಿತ್ರಕಲಾ ತಂಡದಲ್ಲಿ ಭಾಗವಹಿಸಿ, ನಿರ್ದೇಶನ ನೀಡಿದರು. ಟ್ರೀ ಪಾರ್ಕ್‌ನ ಪ್ರಕೃತಿಯ ಸೊಬಗಿನಲ್ಲಿ ನೆರಳಾಶ್ರಯ ಪಡೆದು ಕಿನಾರೆಯಲ್ಲಿ ಪರಿಸರ ವೈವಿಧ್ಯ ಮತ್ತು ದೌರ್ಜನ್ಯಗಳನ್ನು ಬಿಂಬಿಸುವ ಅದ್ಭುತ ಕಲಾಕೃತಿಗಳು ಮೂಡಿಬಂದವು.
ವಿದ್ಯಾರ್ಥಿಗಳೇ ಸ್ವಯಂಸೇವಕರು: ಪರಿಸರ ಸಮ್ಮೇಳನದ ಇಡೀ ದಿನ ಅಲೋಶಿಯಸ್ ಕಾಲೇಜು, ಆಳ್ವಾಸ್ ಕಾಲೇಜು, ಹಳೆಯಂಗಡಿ ನಾರಾಯಣ ಸನಿಲ್ ಕಾಲೇಜು, ಶ್ರೀನಿವಾಸ್ ಕಾಲೇಜು, ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಈ ತಂಡ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಆಹಾರ ಪೂರೈಕೆ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಇವುಗಳ ಮಧ್ಯೆ ಹಸಿರು ಟೀಶರ್ಟ್ ಉಟ್ಟು ಎನ್‌ಇಸಿಎ್ ಕಾರ್ಯಕರ್ತರು, ಸದಸ್ಯರು ಗಮನ ಸೆಳೆದರು.
ವಿಭಿನ್ನ ಕಾರ್ಯಕ್ರಮ: ಪರಿಸರ ಸಮ್ಮೇಳನದಲ್ಲಿ ಭಾಷಣ ಬಿಗಿಯುವವರಿಗೆ ಅವಕಾಶ ಇರಲಿಲ್ಲ. ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಷ್ಟೇ ಚರ್ಚೆಯ ಪ್ರಧಾನ ವಿಷಯವಾಗಿತ್ತು. ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಪದ್ಮಶ್ರೀ ತುಳಸೀಗೌಡ, ಪದ್ಮಶ್ರೀ ಸುಕ್ರೀ ಬೊಮ್ಮಗೌಡ ಹಾಗೂ ಡಿಯಾಗೋ ಬಸ್ತ್ಯಾವ್ ಸಿದ್ದಿ ಗಿಡ ನೆಟ್ಟು ನೀರು ಹಾಕಿದರು. ಸಾಯಂಕಾಲ ಸಮ್ಮೇಳದ ಚರ್ಚೆಯಾದ ವಿಷಯಗಳ ಕುರಿತು ಸಮುದ್ರರಾಜನಿಗೆ ಅರಿಕೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಶಸ್ತಿ ಪ್ರದಾನ
ಸಮ್ಮೇಳನ ಹಿನ್ನೆಲೆಯಲ್ಲಿ ಎತ್ತಿನಹೊಳೆ ಸೇರಿದಂತೆ ವಿವಿಧ ಪರಿಸರ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಡಾ.ರವೀಂದ್ರನಾಥ ಶ್ಯಾನುಭೋಗ್ ಅವರಿಗೆ ‘ನ್ಯಾಯಶ್ರೀ’, ಸುಕ್ರಿ ಬೊಮ್ಮಗೌಡ ಮತ್ತು ಕುತ್ತಾರು ತಿಮ್ಮಕ್ಕ ಅವರಿಗೆ ‘ಜನಪದ ಶ್ರೀ’ ಪ್ರಶಸ್ತಿ, ತುಳಸಿಗೌಡ ಹಾಗೂ ಡಿಯಾಗೋ ಬಸ್ತ್ಯಾವ್ ಸಿದ್ಧಿ ಅವರಿಗೆ ‘ವನಶ್ರೀ’ಪ್ರಶಸ್ತಿ ನೀಡಿ ಗೌರವಿಸಲಾಯಿತು.











