ಶಿವಸೇನೆಯ ‘ಸಾಮ್ನಾ’ ಸಂಪಾದಕಿಯಾಗಿ ಉದ್ಧವ್ ಪತ್ನಿ ರಶ್ಮಿ ಠಾಕ್ರೆ ನೇಮಕ

ಮುಂಬೈ,ಮಾ.1: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಸಮೂಹ ಪತ್ರಿಕೆಗಳ ನೂತನ ಸಂಪಾದಕಿಯಾಗಿ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಯಾದ ಬಳಿಕ ಉದ್ಧವ ರಾಜೀನಾಮೆಯಿಂದಾಗಿ ಈ ಹುದ್ದೆ ತೆರವುಗೊಂಡಿತ್ತು.
ಪ್ರಬೋಧನ ಪ್ರಕಾಶನದ ಒಡೆತನದ ಸಾಮ್ನಾ ಸಮೂಹವು ‘ಸಾಮ್ನಾ’ ಮತ್ತು ‘ದೋಪಹರ್ ಕಾ ಸಾಮನಾ’ದೈನಿಕಗಳನ್ನು ನಡೆಸುತ್ತಿದ್ದು,ಬಾಳ್ ಠಾಕ್ರೆ ಅವರಿಂದ ಸ್ಥಾಪಿತಗೊಂಡಿದೆ. ಸಾಮ್ನಾ ಸಮೂಹದ ಪ್ರಕಾಶಕ ರಾಜೇಂದ್ರ ಎಂ.ಭಾಗವತ ಅವರು ದೈನಿಕಗಳ ರವಿವಾರದ ಸಂಚಿಕೆಯಲ್ಲಿ ನೂತನ ಸಂಪಾದಕಿಯಾಗಿ ರಶ್ಮಿ ಠಾಕ್ರೆ ಹಾಗೂ ಇತರ ಟ್ರಸ್ಟಿಗಳಾಗಿ ಸುಭಾಷ್ ಆರ್.ದೇಸಾಯಿ ಮತ್ತು ಲೀಲಾಧರ ಬಿ.ಡಾಕೆ ಅವರ ಹೆಸರುಗಳನ್ನು ಪ್ರಕಟಿಸಿದ್ದಾರೆ. ಠಾಕ್ರೆ ಕುಟುಂಬದ ಆಪ್ತ ಹಾಗೂ ರಾಜ್ಯಸಭಾ ಸದಸ್ಯ ಸಂಜಯ ರಾವುತ್ ಅವರು ಸಮೂಹದ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿದಿದ್ದಾರೆ.
Next Story





