ಕನ್ನಡದಲ್ಲಿ ಪ್ರಭಾವಿ ನಾಟಕಕಾರರ ಅಗತ್ಯವಿದೆ: ನಟಿ ಅರುಂಧತಿನಾಗ್
ಬೆಂಗಳೂರು, ಮಾ.1: ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ನಂತರ ಪ್ರಭಾವಿ ನಾಟಕಕಾರರ ಸಂಖ್ಯೆ ಕ್ಷಿಣಿಸಿದ್ದು, ಹೊಸದಾಗಿ ಪ್ರಭಾವಿ ನಾಟಕಕಾರರು ಉದಯಿಸಬೇಕಿದೆ ಎಂದು ನಟಿ ಹಾಗೂ ಕಲಾವಿದೆ ಅರುಂಧತಿನಾಗ್ ಹೇಳಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಮೈಲಾಗ್ ಬುಕ್ಸ್ ವತಿಯಿಂದ ಆಯೋಜಿಸಿದ್ದ ಜೋಗಿಯ ‘ಅಶ್ವತ್ಥಾಮನ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತ್ಯದ ಇಲ್ಲದೇ ಇದ್ದರೆ ರಂಗಭೂಮಿ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಎರಡಕ್ಕೂ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಾರ್ನಾಡ್ ಬಳಿಕ ಪ್ರಭಾವಿ ನಾಟಕಕಾರರ ಕೊರತೆ ಕಾಡುತ್ತಿದೆ ಎನಿಸುತ್ತದೆ. ಆದುದರಿಂದಾಗಿ, ಇಂದಿನ ಸಾಹಿತಿಗಳು ಕಾರ್ನಾಡ್‌ರಂತೆ ನಾಟಕ ರಚನೆಗೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯವನ್ನು ಆಡಿಯೋ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಕನ್ನಡ ಓದಲು ಬಾರದವರಿಗೂ ಸಾಹಿತ್ಯವನ್ನು ತಲುಪಿಸುವ ಕೆಲಸ ಮಾಡಲಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂದು ಒಂದು ಪುಸ್ತಕ ಡಿಜಿಟಲ್ ಆಗಿದ್ದು, ಹೀಗೆಯೇ ಹತ್ತಾರು ಪುಸ್ತಕಗಳು ಡಿಜಿಟಲ್ ರೂಪ ಪಡೆಯಲಿ ಎಂದು ಅವರು ಆಶಿಸಿದರು.
ನಟ ಅಚ್ಚುತನ್ ಕುಮಾರ್ ಮಾತನಾಡಿ, ಜೋಗಿ ಅವರು ಇದುವರೆಗೂ ತಮ್ಮ ಬರಹಗಳಲ್ಲಿ ಚದ್ಮವೇಶದಲ್ಲಿದ್ದಾರೆ. ತಮ್ಮನ್ನು ತಾವು ನೇರವಾಗಿ ತೆದುಕೊಳ್ಳುವ ದಿನ ಬರಬೇಕು. ಪವಮಾನ ಅವರಂತಹ ಐಟಿ ಬಿಟಿ ಸೇರಿ ಬೇರೆ ಬೇರೆ ಕ್ಷೇತ್ರದವರು ತಮ್ಮ ಕೆಲಸದ ಜೊತೆಗೆ ಕನ್ನಡದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಅನೇಕ ಲೇಖಕರು ಅತ್ಯುತ್ತಮ ಕೃತಿಗಳನ್ನು ರಚನೆ ಮಾಡುತ್ತಿದ್ದಾರೆ. ಆದರೆ, ಅವು ಸಾಕಷ್ಟು ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಆದುದರಿಂದಾಗಿ, ಪುಸ್ತಕಗಳನ್ನು ಆಡಿಯೋ ಮಾಡುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಈ ವಿಚಾರದಲ್ಲಿ ತಮಿಳಿಗರು ಮುಂಚೂಣಿಯಲ್ಲಿದ್ದು, ಈಗ ಕನ್ನಡಿಗರು ಪಾದಾರ್ಪಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮೈಲಾಗ್ ಬುಕ್ಸ್‌ನ ಪವಮಾನ ಮಾತನಾಡಿ, ಮುದ್ರಿತ ಪುಸ್ತಕದ ಜತೆಗೆ ಆಡಿಯೋ ಬುಕ್ ಬಿಡುಗಡೆ ಮಾಡಲಾಗಿದೆ. ಓದುಗರು ನಮ್ಮ ಆ್ಯಪ್ ಮೂಲಕ ಖರೀದಿ ಮಾಡಬಹುದಾಗಿದೆ. ಇದು ನಮ್ಮದೇ ಆ್ಯಪ್‌ಆಗಿದ್ದು, ಡಿಜಿಟಲ್ ಹಕ್ಕುಗಳನ್ನು ಕಾಪಾಡಲ್ಪಟ್ಟಿದೆ. ಇದನ್ನು ಖರೀದಿಸಿದವರಿಗೆ ಅಷ್ಟೇ, ಓದಲು ಅವಕಾಶ ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟ ವಸಿಸ್ಟ ಸಿಂಹ, ಪತ್ರಕರ್ತ ರವಿ ಹೆಗಡೆ, ಲೇಖಕ ಜೋಗಿ ಸೇರಿದಂತೆ ಮತ್ತಿತರರಿದ್ದರು.







