ರಾಜ್ಯ ಮಟ್ಟದ ಪರಿಸರ ಸಮ್ಮೇಳನ : ಕಡಲತೀರದಲ್ಲಿ ‘ಕೋರ್ಟ್ ಕಲಾಪ’

ಮಂಗಳೂರು, ಮಾ.1: ಪ್ರಕೃತಿ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಸ್ತಕ್ಷೇಪ, ಅರಣ್ಯ ನಾಶ ಕುರಿತು ಎಚ್ಚರಿಕೆ ವಹಿಸುವುದು, ಸಂವಿಧಾನದ 48ಎ ವಿಧಿಯನ್ವಯ ಪರಿಸರ- ವನ್ಯಜೀವಿ ಸಂರಕ್ಷಣೆಗೆ ಸರಕಾರಗಳು ಗಮನ ಹರಿಸುವ ಜವಾಬ್ದಾರಿ ಮರೆಯಬಾರದು ಎನ್ನುವುದನ್ನು ಉಲ್ಲೇಖಿಸಿ ಎರಡನೇ ಪರಿಸರ ಸಮ್ಮೇಳನ ಹಕ್ಕೊತ್ತಾಯ ಮಂಡಿಸಿತು.
ಎನ್‌ಇಸಿಎಫ್ ವತಿಯಿಂದ ರಾಜ್ಯ ಮಟ್ಟದ ಪರಿಸರ ಸಮ್ಮೇಳನವು ತಣ್ಣೀರುಬಾವಿ ಕಡಲತೀರದ ಟ್ರೀಪಾರ್ಕ್‌ನ ಹಸಿರು ಪರಿಸರ ದಲ್ಲಿ ರವಿವಾರ ವಿಭಿನ್ನವಾಗಿ ‘ಕೋರ್ಟ್ ಕಲಾಪ’ ನಡೆಯಿತು.
ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶ್ಯಾನುಭಾಗ್ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ, ತುಳಸೀಗೌಡ, ಹೋರಾಟಗಾರ ಡಿಯಾಗೊ ಬಸ್ತ್ಯಾವ್ ಸಿದ್ದಿ ಸಾಥ್ ನೀಡಿದರು. ಈ ಸಂದರ್ಭ ನ್ಯಾಯವಾದಿಗಳ ತಂಡ ವಾದ ಮಂಡಿಸಿತು.
ರಾಜ್ಯಾದ್ಯಂತ ನಡೆಯುತ್ತಿರುವ ಪರಿಸರ ನಾಶ ಕುರಿತು ಒಟ್ಟು 36 ಪ್ರಕರಣಗಳ ವಿಚಾರಣೆ ನಡೆಯಿತು. ಈ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದು, ಹೀಗೇ ಮುಂದುವರಿದರೆ ಜನ- ವನ್ಯಪ್ರಾಣಿ ಸಂಕುಲಕ್ಕೆ ಅಪಾಯ ಕಾದಿದೆ. ಈ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ರವೀಂದ್ರನಾಥ್ ಶ್ಯಾನುಭಾಗ್ ತಿಳಿಸಿದರು.
ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರಗಳು ಆರಂಭಿಕ ಉಪಕ್ರಮ ಗಳನ್ನು ಕೈಗೊಳ್ಳಬೇಕಾಗುತ್ತದೆ. ಸಂವಿಧಾನಬದ್ಧ ಈ ಜವಾಬ್ದಾರಿಯನ್ನು ಸರಕಾರ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಕೃತಿಯ ತಾಯಂದಿರಾದ ಸುಕ್ರಿ ಬೊಮ್ಮಗೌಡ, ತುಳಸೀ ಗೌಡ ಅಂಥವರು ಮರಗಳನ್ನು ಬೆಳೆಸುತ್ತಿದ್ದರೆ, ಮತ್ತೊಂದೆಡೆ ವಿವಿಧ ಯೋಜನೆಗಳಿಗೆ ಅವ್ಯಾಹತವಾಗಿ ಮರ ಹನನ ಮಾಡಲಾಗುತ್ತಿದೆ. ಹಾಗಾಗಿ ಸರಕಾರದ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸವೂ ಆಗಬೇಕು. ಸಂವಿಧಾನದ 48ಎ, 51ನೇ ವಿಧಿಗಳ ಪ್ರಕಾರ ಪರಿಸರ ಸಂರಕ್ಷಣೆಯಲ್ಲಿ ಜನರದ್ದೂ ಪಾಲು ಇದೆ. ಈ ಜವಾಬ್ದಾರಿಯನ್ನು ಕೂಡ ನಿರ್ವಹಿಸಬೇಕು ಎನ್ನುವುದನ್ನು ನ್ಯಾಯಾಧೀಶರು ಉಲ್ಲೇಖಿಸಿದರು.
ಶಿವಮೊಗ್ಗದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಅವರು ‘ಪರಿಸರ ಅತ್ಯಾಚಾರ ಪ್ರಕರಣ’ಕ್ಕೆ ಸಂಬಂಧಿಸಿದಂತೆ ದೂರು-ವರದಿಗಳ ಸಾಲುಸಾಲು ಪ್ರತಿಗಳನ್ನೇ ಹಾಜರುಪಡಿಸಿದರು. ಪರಿಸರ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಷೇಪವನ್ನು ಸವಿವರವಾಗಿ ಅಂಕೆ-ಸಂಖ್ಯೆ ಸಹಿತ ನ್ಯಾಯಮೂರ್ತಿ ಎದುರು ಬಿಚ್ಚಿಟ್ಟರು. ಎಲ್ಲ ಪ್ರಕರಣದಲ್ಲೂ ಸರಕಾರದ ನೇರ ಹಸ್ತಕ್ಷೇಪವಿದೆ ಎಂದೂ ದೂರಿದರು.
ಕಳಸಾ-ಬಂಡೂರಿ ಯೋಜನೆ ವ್ಯಾಪ್ತಿಯ ಭೀಮಗಡ ವನ್ಯಧಾಮಕ್ಕೆಂದು 500 ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ಕಾಡನ್ನು ಕಡಿಯಲಾ ಗುತ್ತಿದೆ. ಇದರಿಂದ ರಾಜ್ಯದ ಬೆಳಗಾವಿ ಸಹಿತ ಗೋವಾದಲ್ಲಿ ಲಕ್ಷಾಂತರ ಮರಗಳ ಹನನವಾಗಲಿದೆ ಎಂದು ಅಖಿಲೇಶ್ ಕೋರ್ಟ್‌ಗೆ ಮಾಹಿತಿ ನೀಡಿದರು.
ರಸ್ತೆ ಅಗಲೀಕರಣ, ನೀರಾವರಿ ಮತ್ತಿತರ ಯೋಜನೆಗಳ ಮೂಲಕ ಪರಿಸರದ ಮೇಲೆ ಸರಕಾರವೇ ಅತ್ಯಾಚಾರ ಎಸಗುತ್ತಿದೆ. 20ಕ್ಕೂ ಅಧಿಕ ಯೋಜನೆಗಳ ಮೂಲಕ ಲಕ್ಷಗಟ್ಟಲೆ ಮರಗಳನ್ನು ಕಡಿಯಲು ಮುಂದಾಗಿದೆ. ಪರಿಸರ ರಕ್ಷಣೆಗೆ ಮಾಧವ ಗಾಡ್ಗೀಳ್ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಶ್ಯಾನುಭಾಗ್, ಈ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
1994ರಲ್ಲಿ ಕೊಜೆಂಟ್ರಿಕ್ಸ್ ಯೋಜನೆ ಬಂದಾಗ ಶಿವರಾಮ ಕಾರಂತರಾದಿಯಾಗಿ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಬಳಿಕ ‘ಈ ಯೋಜನೆಯಿಂದ ಪರಿಸರ ಹಾನಿ ಇದ್ದರೂ ವಿದ್ಯುತ್ ಬೇಕು. ಅದಕ್ಕಾಗಿ ಅನುಮತಿ ನೀಡುತ್ತಿದ್ದೇವೆ’ ಎಂದು ನ್ಯಾಯಾಲಯವೇ ಹೇಳಿತ್ತು. ಇಂಥ ಪರಿಸ್ಥಿತಿ ಇದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಗುರುತಿಸಿದ 16 ಅಳಿವಿನಂಚಿನ ಜೀವಿಗಳ ಪೈಕಿ ಒಂದಾಗಿರುವ ಕಾಳಿಂಗ ಸರ್ಪದ ಸಂತತಿ ಪಶ್ಚಿಮ ಘಟ್ಟದಲ್ಲಿ ತೀವ್ರವಾಗಿ ನಶಿಸುತ್ತಿರುವುದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವಿಷಕಾರಿ ಹೊಗೆಯುಗುಳುವ ವಾಹನಗಳಿಂದ ವಾಯು ಮಾಲಿನ್ಯ ತೀವ್ರವಾಗುತ್ತಿದೆ. ಇಂಥ ವಾಹನಗಳಿಗೆ ಸರಕಾರ ಕೇವಲ ದಂಡ ಹಾಕಿದರೆ ಸಾಲದು, ಅಂಥ ವಾಹನಗಳನ್ನು ಮುಟ್ಟುಗೋಲು ಹಾಕಿ ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎನ್ನುವ ಅಭಿಪ್ರಾಯಗಳೂ ಕಲಾಪದಲ್ಲಿ ಕೇಳಿ ಬಂದವು.
ನ್ಯಾಯವಾದಿಗಳಾದ ಸುಮಾ ಆರ್. ನಾಯಕ್, ಎಸ್.ಬಿ. ಪಾಟೀಲ್ ರಾಯಚೂರು, ಅಭಿಜಿತ್, ನಟರಾಜ್, ಜೀವನ್‌ದಾಸ್ ಶೆಟ್ಟಿ, ಜಿನೇಂದ್ರ ಬಿ., ರಮೇಶ ನಾಡಗೌಡ ಅಭಿಪ್ರಾಯ ಮಂಡಿಸಿದರು.
ಕಾರ್ಯಕ್ರಮ ಸಂಯೋಜಕರಾಗಿರುವ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಎನ್‌ಇಸಿಎಫ್‌ನ ಶಶಿಧರ ಶೆಟ್ಟಿ ಹಾಜರಿದ್ದು, ವಿವಿಧ ಪರಿಸರ ನಾಶ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಎನ್‌ಇಸಿಎಫ್ ರಾಜ್ಯಾಧ್ಯಕ್ಷ ಸ್ವರ್ಣ ಸುಂದರ್ ಸ್ವಾಗತಿಸಿ, ನಯನಾ ಶೆಟ್ಟಿ ನಿರೂಪಿಸಿದರು.
ಕಡಲಾಮೆ ನಾಪತ್ತೆ
ಲಕ್ಷಾಂತರ ಸಂಖ್ಯೆಯಲ್ಲಿ ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತಿದ್ದ ಕಡಲಾಮೆಗಳು ಕಳೆದ ಏಳು ವರ್ಷಗಳಿಂದ ದಡಕ್ಕೆ ಬಂದಿಲ್ಲ. ಮಂಗಳೂರಿನಿಂದ ಕಾರವಾರದವರೆಗೆ ಕಡಲು ತೀವ್ರವಾಗಿ ಕಲುಷಿತಗೊಂಡಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಸರಕಾರ ಎಂದೂ ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಹಡಗುಗಳ ತ್ಯಾಜ್ಯ ತೈಲವನ್ನು ಸಮುದ್ರಕ್ಕೇ ಸುರಿಯುತ್ತಿರು ವುದರಿಂದಲೂ ಜಲಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಯೋಜನೆ ರೂಪಿಸಬೇಕು ಎಂದು ಸಂಶೋಧನಾ ವಿದ್ಯಾರ್ಥಿ ಮಮತಾ ಕೆ.ಎಸ್. ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದರು.







