ಆಂಗ್ಲ-ಕೊಂಕಣಿ ಲೇಖಕ ರಿಚರ್ಡ್ ಜಾನ್ ಪಾಯ್ಸ್ ನಿಧನ

ಮಂಗಳೂರು, ಮಾ.1: ಖ್ಯಾತ ಆಂಗ್ಲ, ಕೊಂಕಣಿ ಲೇಖಕ ಹಾಗೂ ದಾಯ್ಜಿವರ್ಲ್ಡ್‌ನ ಸಂಪಾದಕೀಯ ಮುಖ್ಯಸ್ಥ ರಿಚರ್ಡ್ ಜಾನ್ ಪಾಯ್ಸ್ (51) ರವಿವಾರ ಬೆಳಗ್ಗೆ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೂಲತಃ ಚಿಕ್ಕಮಗಳೂರಿನವರಾದ ಅವರು ರೊಝಾರಿಯೊ ಬಳಿ ವಾಸವಿದ್ದರು. ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಆರ್.ಜೆ.ಪಿ. ಎಂದು ಖ್ಯಾತರಾಗಿದ್ದ ರಿಚರ್ಡ್ ಜಾನ್ ಪಾಯ್ಸ್ ಆಂಗ್ಲ ಹಾಗೂ ಕೊಂಕಣಿ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ರಿಚರ್ಡ್ ಅವರ ಪ್ರಚಲಿತ ವಿದ್ಯಮಾನದ ವಿಡಂಬನಾತ್ಮಕ ಲೇಖನಗಳು ಕೊಂಕಣಿಯಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಅವರ ಸಣ್ಣ ಕಥೆಗಳು ಹಾಗೂ ಕವನಗಳು ಕೊಂಕಣಿ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದವು. ಕೊಂಕಣಿಯಲ್ಲಿನ ವಿಡಂಬನಾತ್ಮಕ ಪ್ರಬಂಧಗಳ ಸಂಗ್ರಹ ಕೃತಿ ‘ಕೊಲೊವೆರಿ’ 2012ರಲ್ಲಿ ಪ್ರಕಟವಾಗಿತ್ತು. ಆ ಬಳಿಕ ‘ವಿದುಷಕ್’ ಹಾಗೂ ‘ಫಾಥರ್’ ಪುಸ್ತಕಗಳನ್ನು ಪ್ರಕಟಿಸಿದ್ದರು. 2020ರಲ್ಲಿ ‘ಫಾಥರ್’ಗೆ ಟಿಎಂಪೈ ಪ್ರಶಸ್ತಿ ಒಲಿದು ಬಂದಿತ್ತು. ರಿಚರ್ಡ್ ಕೊಂಕಣಿ ನಾಟಕ ಕಾರರಾಗಿಯೂ ಗುರುತಿಸಿಕೊಂಡಿದ್ದರು. ಅವರ ‘ಪಾಂಚ್ ಮೊರ್ನಮ್’ ನಾಟಕ ಪ್ರಸಿದ್ಧಿ ಪಡೆದಿತ್ತು.





