ಅಬ್ಬಕ್ಕ ಭವನಕ್ಕೆ ಶೀಘ್ರ ಚಾಲನೆ: ಸಚಿವ ಕೋಟ
► ಅಬ್ಬಕ್ಕ ಉತ್ಸವದ ಸಮಾರೋಪ ► ಇಬ್ಬರು ಸಾಧಕಿಯರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು, ಮಾ.1: ನನೆಗುದಿಗೆ ಬಿದ್ದಿರುವ ‘ಅಬ್ಬಕ್ಕ ಭವನ’ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಅದಕ್ಕಾಗಿ 8 ಕೋ.ರೂ. ವ್ಯಯಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಕಳೆದ ಎರಡು ದಿನ ನಡೆಯುತ್ತಿದ್ದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಣಿ ಅಬ್ಬಕ್ಕ ತಾಯ್ನಡಿಗಾಗಿ ತನ್ನ ಬದುಕನ್ನೇ ತ್ಯಾಗ ಮಾಡಿದ್ದರು. ರಾಷ್ಟ್ರ ಪ್ರೇಮಿಗಳಿಗೆ ದೇಶಕ್ಕಾಗಿ ಹೋರಾಡಿದವರ ಹೆಸರು ನೆನಪು ಬರುವುದಾದರೆ ಮೊದಲ ಹೆಸರು ಅಬ್ಬಕ್ಕಳದ್ದಾಗಿರಬೇಕು ಎಂದು ಕೋಟ ತಿಳಿಸಿದರು.
ಅಬ್ಬಕ್ಕ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಸಾಹಿತಿ ಉಷಾ ಪಿ. ರೈ ಮತ್ತು ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿಗೆ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಉಷಾ ಪಿ.ರೈ ಕುಟುಂಬ ಮತ್ತು ನಾಡಿನ ಜನರನ್ನು ಉಳಿಸಲು ಅಬ್ಬಕ್ಕ ಮಾಡಿದ ಹೋರಾಟವು ಆಕೆಯ ಶೌರ್ಯಕ್ಕೆ ಸಾಕ್ಷಿ, ಆಕೆಯ ಸೈನ್ಯದಲ್ಲಿ ಎಲ್ಲಾ ಧರ್ಮದವರಿದ್ದರು. ಅದರಲ್ಲೂ ಪ್ರಮುಖವಾಗಿ ಬ್ಯಾರಿಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದರು. ಕೊನೆಗಾಲದಲ್ಲಿ ಅವರು ಮಸೀದಿಯಲ್ಲಿ ರಕ್ಷಣೆ ಪಡೆದಿದ್ದರು ಎಂದರು.
ಹಿಂದಿನ ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಘರ್ಷಣೆ ನಡೆದ ನೆನಪಿಲ್ಲ. ಈಗಿನ ಮಕ್ಕಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಜಾತಿ, ಮತಗಳ ಕಾರಣಕ್ಕೆ ಬೆಂಕಿ ಹೊತ್ತಿ ಉರಿದಾಗ ಬೇಸರವಾಗುತ್ತದೆ. ಹಿಂದೆಲ್ಲಾ ಇಲ್ಲದ ಎಡ, ಬಲ ಎನ್ನುವ ಪದ ಇಂದು ಹುಟ್ಟಿಕೊಂಡಿರುವುದರಿಂದ ಮಾತನಾಡಲು ಹಿಂಜರಿಕೆಯಾಗುತ್ತದೆ. ಆಳುವವರು ಯಾರೇ ಆದರೂ ದೇಶ ನಮ್ಮದು ಎಂದು ಭಾವಿಸಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದು. ಹೆತ್ತವರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ವಿದ್ಯೆಯಾಗಿದೆ ಎಂದು ಉಷಾ ಪಿ.ರೈ ಹೇಳಿದರು.
ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ರಾಜ್ಯ ತುಳು ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು. ದ.ಕ ಜಿಪಂ ಸಿಇಒ ಡಾ. ಸೆಲ್ವಮಣಿ ಆರ್. ಸ್ವಾಗತಿಸಿದರು. ರಾಜೇಶ್ ವಂದಿಸಿದರು.











