ಆಧುನಿಕ ತಂತ್ರಜ್ಞಾನದಿಂದ ದೇಶದಲ್ಲಿ ನಿರುದ್ಯೋಗ ಭೀತಿ: ಡಾ. ನಾಬರ್ಟ್ ಲೋಬೊ
ಪುಡಾರ್ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ಪ್ರದಾನ

ಮಂಗಳೂರು, ಮಾ.1: ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 2.10 ಲಕ್ಷ ಉದ್ಯೋಗಗಳು ಕಣ್ಮರೆಯಾಗಿದೆ. ಇದಕ್ಕೆ ಸರಕಾರವೇ ಕಾರಣ ಎನ್ನುವ ಬದಲು ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಿಂದ ಇಂತಹ ಸಮಸ್ಯೆ ಎದುರಾಗಿದೆ ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ ವಿಭಾಗದ ಮುಖ್ಯಸ್ಥ ಡಾ. ನಾರ್ಬರ್ಟ್ ಲೋಬೋ ಹೇಳಿದರು.
ಪುಡಾರ್ ಪ್ರತಿಷ್ಠಾನದ ವತಿಯಿಂದ ಉಡುಪಿ, ದ.ಕ. ಧರ್ಮಪ್ರಾಂತದ ಎಸ್ಸೆಸ್ಸೆಲ್ಸಿ, ಪಿಯುಸಿ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗರದ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಿಂದ ಆರು ವಿದೇಶಗಳಿಗೆ ಹೋಗುವ ಪ್ರಮಾಣ ನಿರಂತರವಾಗಿ ಕುಸಿಯುತ್ತಿದೆ. ಅಲ್ಲಿ ಹೇಳಿಕೊಳ್ಳುವ ವೇತನ ಈಗ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಉದ್ಯೋಗದ ವೀಸಾ ನವೀಕರಣದಲ್ಲಿ ಶೇ.28ರಷ್ಟು ಕುಸಿತ ಕಂಡಿದೆ. ವಿದೇಶಿ ಉದ್ಯೋಗದ ಕಡೆಗೆ ವಿದ್ಯಾರ್ಥಿಗಳು ಹೋಗುವ ಬದಲು ಸರಕಾರಿ ಕ್ಷೇತ್ರ, ನೌಕರಿ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಸೆಂಟರ್ ಫಾರ್ ಮೊನಿಟರಿಂಗ್ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಪ್ರೈಮೆರಿ ಸೆಕ್ಟರ್ ಉದ್ಯೋಗ ಕ್ಷೇತ್ರವೇ ಕುಸಿತ ಕಾಣುತ್ತಿದೆ. ಇದರ ಜತೆಯಲ್ಲಿ ಕಳೆದ 45 ವರ್ಷಗಳಿಂದ ನಿರುದ್ಯೋಗ ಪ್ರಮಾಣ ಕೂಡ ಅಷ್ಟೇ ಜೋರಾಗಿ ಏರಿಕೆಯಾಗುತ್ತಿರು ವುದು ಕಳವಳಕಾರಿಯಾದ ವಿಚಾರ ಎಂದು ಡಾ. ನಾಬರ್ಟ್ ಲೋಬೋ ನುಡಿದರು.
ಯಾವುದೇ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ಇರುತ್ತದೆ. ಆದರೆ ಇಂದಿನ ವಿದ್ಯಾರ್ಥಿಗಳು ಬರೀ ಹಣದ ಹಿಂದೆ ಬಿದ್ದ ಪರಿಣಾಮ ವಿದ್ಯಾರ್ಥಿಗಳು ಸರಕಾರಿ ಕ್ಷೇತ್ರದ ನೌಕರಿ ಕಡೆಗೆ ಮುಖ ಮಾಡುತ್ತಿಲ್ಲ. ವಾರ್ಷಿಕ ಇನ್‌ಕ್ರಿಮೆಂಟ್ ಸಹಿತ ಹತ್ತು ಹಲವು ಭತ್ತೆಗಳು ಸರಕಾರಿ ಕೆಲಸಗಾರರಿಗೆ ಸಿಗುತ್ತದೆ. ಇದು ಯಾವುದೇ ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಉದ್ಯೋಗ ಅರಸಿಕೊಂಡು ವಲಸೆ ಹೋಗುವ ಬದಲು ಸರಕಾರಿ ನೌಕರಿ ಕಡೆಗೆ ಗಮನ ನೀಡುವ ಅಗತ್ಯವಿದೆ ಎಂದು ನಾಬರ್ಟ್ ಲೋಬೋ ಹೇಳಿದರು.
ಸರಕಾರಿ ನೌಕರಿಯಲ್ಲಿ ಪ್ರಾಮಾಣಿಕತೆ ಜತೆಗೆ ಪ್ರಾತಿನಿಧ್ಯಬೇಕು. 22 ವರ್ಷ ದಾಟಿದ ಒಬ್ಬ ಸರಕಾರಿ ಉಪನ್ಯಾಸಕ ಈಗ 84 ಸಾವಿರ ವೇತನ ಪಡೆಯಬಲ್ಲ. ಹಾಗಾಗಿ ಸರಕಾರಿ ಉದ್ಯೋಗದ ಕಡೆಗೆ ಆಕರ್ಷಣೆ ಬೆಳೆಸಿಕೊಂಡು ವಿದ್ಯಾರ್ಥಿಗಳು ಮುಂದೆ ಸಾಗಬೇಕು ಎಂದರು.
ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮಾತನಾಡಿ, ಮಕ್ಕಳು ಇತರರ ಅಂಕಗಳನ್ನು ಮಾದರಿಯಾಗಿಟ್ಟುಕೊಳ್ಳುವ ಬದಲು ತನ್ನ ಸಾಮರ್ಥ್ಯಕ್ಕೆ ತನ್ನಿಂದಾಗುವ ಪ್ರಯತ್ನ ಮಾಡಬೇಕು. ಸೋಲು ಗೆಲುವು ಎನ್ನುವ ವಿಚಾರಗಳು ಬದುಕನ್ನು ನಿರ್ಧಾರ ಮಾಡುವುದಿಲ್ಲ ಎನ್ನುವುದನ್ನು ಕಲಿತುಕೊಳ್ಳಬೇಕು ಎಂದರು.
ಪುಡಾರ್ ಪ್ರತಿಷ್ಠಾನ ಅಧ್ಯಕ್ಷ ಜಾನ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಯಾಗಿ ಮಂಗಳೂರು ಪ್ರಾದೇಶಿಕ ಯೂನಿಟ್‌ನ ಸೀನಿಯರ್ ಇಂಟೆಲಿಜೆನ್ಸ್ ಅಧಿಕಾರಿ ಎಲೆನ್ ರಾಜೇಶ್ ವಾಸ್ ಮಾತನಾಡಿದರು. ಈ ಸಂದರ್ಭ ಮಂಗಳೂರು, ಉಡುಪಿ ಧರ್ಮಪ್ರಾಂತಕ್ಕೆ ಸಂಬಂಧಪಟ್ಟಂತೆ ಎಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 176 ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ಈ ಸಂದರ್ಭ ಮಂಗಳೂರು ಪ್ರದೇಶ್ ಕೆಥೋಲಿಕ್ ಸಭಾದ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ, ಉಡುಪಿ ಪ್ರದೇಶ್ ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಪುಡಾರ್ ಪ್ರತಿಷ್ಠಾನದ ಕಾರ್ಯದರ್ಶಿ ಎಲ್.ಜೆ. ಫೆರ್ನಾಂಡೀಸ್, ಖಜಾಂಚಿ ಎಲ್‌ರ್ಯೋ ಕಿರಣ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.
ಪುಡಾರ್ ಪ್ರತಿಷ್ಠಾನದ ಉಪಾಧ್ಯಕ್ಷ ಫಾ. ವಾಲ್ಟರ್ ಡಿಮೆಲ್ಲೋ ಸ್ವಾಗತಿಸಿದರು.
ಆತ್ಮಹತ್ಯಾ ತಡೆ ಅಭಿಯಾನಕ್ಕೆ ಚಾಲನೆ
ಮಂಗಳೂರು ಧರ್ಮಪ್ರಾಂತವು ಈ ವರ್ಷ ಆರಂಭಿಸಿರುವ ಆತ್ಮಹತ್ಯಾ ತಡೆ ಅಭಿಯಾನಕ್ಕೆ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಅಭಿಯಾನದ ಕರಪತ್ರವನ್ನು ಬಿಡುಗಡೆಯೊಂದಿಗೆ ಹಳದಿ ರಿಬ್ಬನ್ ಧರಿಸುವ ಪ್ರಕ್ರಿಯೆಯೂ ನಡೆಯಿತು.
ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಲಾವ್ದ್‌ತೋ ಸಿ ಸಂಚಾಲಕ ಫಾ.ರಿಚರ್ಡ್ ಡಿಸೋಜ ‘ಆತ್ಮಹತ್ಯಾ ತಡೆ ಅಭಿಯಾನ’ ಹಾಗೂ ಅದರ ಮಹತ್ವದ ಕುರಿತು ಮಾತನಾಡಿದರು.








