ಪಡುಬಿದ್ರಿ : ಫೋಟೋಗ್ರಾಫರ್ಸ್ ಜಿಲ್ಲಾ ಮಟ್ಟದ ಕ್ರೀಡಾಕೂಟ

ಪಡುಬಿದ್ರಿ : ಚಾಕಚಕ್ಯತೆಯ ಬೆಳಕು ನೆರಳಿನಾಟವಾದ ಫೋಟೋಗ್ರಫಿ ಉತ್ತಮ ಕಲೆಯಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಅವರು ರವಿವಾರ ಉಡುಪಿ ಜಿಲ್ಲೆಯ ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್‍ಕೆಪಿಎ) ಕಾಪು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಸಮಸ್ಯೆ, ಅವಕಾಶಗಳ ನಡುವೆ ಎಸ್.ಕೆ.ಪಿ.ಎ. ಸಂಸ್ಥೆಯು ಸಂಘಟನಾತ್ಮಕ ಸಂಘಟನೆಯ ಮೂಲಕ ನಡೆಸುತ್ತಿರುವ ಕ್ರೀಡಾಕೂಟವು ಯಶಸ್ವಿಯಾಗಲಿ ಎಂದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಸಮಾಜ ಕಟ್ಟುವ ಕಾಯಕ ನಿರತ ಫೋಟೋಗ್ರಾಫರ್ಸ್ ಈ ಕ್ರೀಡಾಕೂಟದ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಿದಂತಾಗುತ್ತದೆ. ಜಾತಿ, ಮತ, ಪಂಥ, ವಯಸ್ಸನ್ನೂ ಮೀರಿ ಹಬ್ಬದ ವಾತಾವರಣ ಈ ಕ್ರೀಡಾಕೂಟದಿಂದ ನಿರ್ಮಾಣವಾಗಿದೆ ಎಂದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಆಶೀರ್ವಚಿಸಿದರು. ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಎಸ್.ಕೆ.ಪಿ.ಎ ಸಂಭ್ರಮಾಚರಿಸಿತು.
ಎಸ್.ಕೆ.ಪಿ.ಎ. ಕಾಪು ವಲಯಾಧ್ಯಕ್ಷ ವೀರೇಂದ್ರ ಎಸ್ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘಟನೆಯ ಪ್ರಮುಖರಾದ ವಿಠಲ ಚೌಟ, ವಿಲ್ಸನ್ ಗೊನ್ಸಾಲ್ವಿಸ್, ದಯಾನಂದ ಬಂಟ್ವಾಳ್ ಆವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂ. ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಶಿಲ್ಪಾ ಜಿ.ಸುವರ್ಣ, ಎಸ್‍ಕೆಪಿಎ ದ.ಕ., ಉಡುಪಿ ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್ ಶೆಟ್ಟಿ, ಕಾಂಗ್ರೇಸ್ ಮುಖಂಡ ನವೀನ್‍ಚಂದ್ರ ಜೆ. ಶೆಟ್ಟಿ, ಉಚ್ಚಿಲ ಸರಸ್ವತಿ ಮಂದಿರ ಶಾಲಾ ಸಂಚಾಲಕ ಗಂಗಾಧರ್ ಸುವರ್ಣ, ಉಚ್ಚಿಲ ಬಡಾಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಎಸ್. ಶೆಟ್ಟಿ, ಎಸ್‍ಕೆಪಿಎ ಎಸ್‍ಕೆಪಿಎ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಕಾಪು ವಲಯ ಗೌರವಾಧ್ಯಕ್ಷ ಅನಂತರಾಜ್ ಭಟ್, ಪ್ರಧಾನ ಕಾರ್ಯದರ್ಶಿ ಸಚಿನ್ ಉಚ್ಚಿಲ, ಸ್ಥಳೀಯ ಹಿರಿಯ ಸದಸ್ಯ ಬಾಲಕೃಷ್ಣ ಪೂಜಾರಿ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಉದಯ್ ಮುಂಡ್ಕೂರು ಸ್ವಾಗತಿಸಿದರು. ವಲಯ ಕ್ರೀಡಾಕಾರ್ಯದರ್ಶಿ ಸುರೇಶ್ ಎರ್ಮಾಳು ವಂದಿಸಿದರು. ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







