ಖೇಲೋ ಇಂಡಿಯಾ ಕ್ರೀಡಾಕೂಟ : ಮಂಗಳೂರು ವಿವಿ ಪುರುಷ, ಮಹಿಳಾ ತಂಡ ಚಾಂಪಿಯನ್

ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ ಖೇಲೋ ಇಂಡಿಯಾ ಕ್ರೀಡಾಕೂಟ ದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷ ತಂಡ 64 ಅಂಕಗಳೊಂದಿಗೆ ಹಾಗೂ ಮಹಿಳಾ ತಂಡ 51 ಅಂಕಗಳೊಂದಿಗೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಒಟ್ಟು 115 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ನಾಗಿ ಹೊರಹೊಮ್ಮಿತು.
ಮಂಗಳೂರು ವಿವಿಯ ಒಟ್ಟು 7 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ ಚಾಂಪಿಯನ್ನ ಪಟ್ಟವನ್ನು ತನ್ನಾದಾಗಿಸಿ ಕೊಂಡಿತು. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 32 ವಿದ್ಯಾರ್ಥಿಗಳ ತಂಡದಲ್ಲಿ 30 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದರು. ಗಳಿಸಿದ ಒಟ್ಟು 18 ಪದಕಗಳಲ್ಲಿ 17 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಪಾಲಾಗಿದ್ದವು. ಬೆಳ್ಳಿ ಪದಕ ಪಡೆದ 4x100 ರಿಲೇಯ 4 ಜನರ ತಂಡದಲ್ಲಿ ಇಬ್ಬರು ಆಳ್ವಾಸ್‍ನ ವಿದ್ಯಾರ್ಥಿಗಳಾಗಿದ್ದು, ಉಳಿದಿಬ್ಬರೂ ಉಡುಪಿಯ ಎಂಜಿಎಂ ಕಾಲೇಜು ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.






