ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಬದಲಾವಣೆ ಸಾಧ್ಯ: ಹಿರಿಯ ನಟಿ ರಾಮೇಶ್ವರಿ ವರ್ಮ
ಆನಂದಿ ಗೋಪಾಲ್ ಸಿನೆಮಾ ಸಂವಾದ
ಬೆಂಗಳೂರು, ಮಾ.1: ಪುರುಷ ಸಮುದಾಯ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಸಮಾಜವೂ ಬದಲಾವಣೆಯತ್ತ ಸಾಗಲಿದೆ ಎಂದು ಹಿರಿಯ ನಟಿ ರಾಮೇಶ್ವರಿ ವರ್ಮ ತಿಳಿಸಿದ್ದಾರೆ.
ರವಿವಾರ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ನಗರದ ಡಾ.ರಾಜ್ ಭವನದಲ್ಲಿ ಆಯೋಜಿಸಿದ್ದ ಮರಾಠಿಯ ಆನಂದಿ ಗೋಪಾಲ್ ಸಿನೆಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಗೆ ಪುರುಷನಷ್ಟೇ ಸಮಾಜ ಅವಕಾಶಗಳನ್ನು ನೀಡುವಂತಹ ವಾತಾವರಣ ನಿರ್ಮಾಣವಾದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಸಮಾಜ ಸುಧಾರಕ ಜ್ಯೋತಿ ಬಾಪುಲೆ ತನ್ನ ಹೆಂಡತಿ ಸಾವಿತ್ರಿ ಬಾಪುಲೆಗೆ ಸ್ವತಃ ಶಿಕ್ಷಣ ಕಲಿಸುವ ಮೂಲಕ ಸಮಾಜದಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು. ಹಾಗೆಯೇ ಅಂಚೆ ಇಲಾಖೆಯ ನೌಕರನಾಗಿದ್ದ ಗೋಪಾಲ್‌ರಾವ್ ತನ್ನ ಹೆಂಡತಿ ಆನಂದಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ದೇಶದ ಮೊದಲ ವೈದ್ಯೆಯಾಗುವಂತೆ ಮಾಡಿದರು. ಹೀಗೆ ಪುರುಷರು-ಮಹಿಳೆ ಪರಸ್ಪರ ಬೆಂಬಲದಿಂದ ಜೀವಿಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಅವರು ಆಶಿಸಿದರು.
ಹಿರಿಯ ಕವಯಿತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, ಹೊರ ದೇಶದಲ್ಲಿ ಸಣ್ಣ ಸಣ್ಣ ವಸ್ತುಗಳನ್ನು ಆಧರಿಸಿಯೇ ವಿಶ್ವವೇ ಬೆರಗಾಗಿ ನೋಡುವಂತಹ ಸಿನೆಮಾವನ್ನು ನಿರ್ಮಾಣ ಮಾಡುತ್ತಾರೆ. ಭಾರತದಲ್ಲಿ ಸಿನೆಮಾ ತಯಾರಿಕೆಗೆ ಸೂಕ್ತವಾದಂತಹ ನೂರಾರು, ಸಾವಿರಾರು ವಿಷಯಗಳಿವೆ. ಆದರೆ, ಆ ವಿಷಯಗಳು ಸಿನೆಮಾ ಆಗಿ ಮೂಡಿ ಬರುತ್ತಿಲ್ಲವೆಂದು ವಿಷಾದಿಸಿದರು.
ಮರಾಠಿಯಲ್ಲಿ ನಿರ್ಮಾಣಗೊಂಡಿರುವ ‘ಆನಂದಿ ಗೋಪಾಲ್’ ಸಿನೆಮಾವು ಇವತ್ತಿನ ಸಮಾಜಕ್ಕೆ ಅಗತ್ಯವಾದ ಕತಾವಸ್ತುವನ್ನು ಒಳಗೊಂಡಿದ್ದು, ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳು ವೈದ್ಯೆಯಾಗಲು ನಡೆಸುವ ಹೋರಾಟ ಯುವ ಜನತೆಗೆ ಮಾದರಿಯಾಗುವಂತಿದೆ. ಹಾಗೂ ಗಂಡ ಹಾಗೂ ಹೆಂಡತಿ ಪರಸ್ಪರ ಪೂರಕವಾಗಿ ಸ್ಪಂದಿಸಿದರೆ ಎಂತಹದ್ದೆ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬಹುದೆಂಬುದಕ್ಕೆ ಈ ಸಿನೆಮಾ ಉತ್ತಮ ಉದಾಹರಣೆಯಾಗಲಿದೆ ಎಂದು ಅವರು ತಿಳಿಸಿದರು.
ಭಾರತದಂತಹ ಸಂಪ್ರದಾಯಸ್ಥ ಸಮಾಜದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರ ಕುರಿತು ಸಿನೆಮಾಗಳು ನಿರ್ಮಾಣವಾಗಬೇಕು. ಇದರಿಂದ ಇಂದಿನ ಯುವ ಜನತೆ ನಮ್ಮ ಹಿರಿಯರು ಸಾಗಿ ಬಂದ ಹಾದಿ ಎಷ್ಟು ಕಠಿಣವಾಗಿದೆ ಎಂಬುದರ ಕುರಿತು ಜಾಗೃತಿಗೊಂಡು, ತಾವು ಅವರಂತೆ ಆಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಯಾವುದೇ ಸಿನೆಮಾ ನಿರ್ಮಾಣಗೊಳ್ಳಬೇಕಾದರು ಸಾಕಷ್ಟು ಹಣ ವ್ಯಯವಾಗುತ್ತದೆ. ಹೀಗಾಗಿ ಉತ್ತಮ ಸಿನೆಮಾಗಳನ್ನು ಜನತೆ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಆನಂದಿ ಗೋಪಾಲ್ ಸಿನೆಮಾವನ್ನು ಜನತೆಯ ಮಧ್ಯೆ ಕೊಂಡೊಯ್ಯಬೇಕೆಂದು ಅವರು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಗಾಯತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







