ಸಿದ್ದಗಂಗಾ ಶ್ರೀ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಿದ್ದರು: ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್
ಬೆಂಗಳೂರು, ಮಾ.1: ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಅವರು ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಾಗಿರದೇ ಎಲ್ಲರಿಗೂ ಶಿಕ್ಷಣ, ಅನ್ನ ದಾಸೋಹ ಸೇರಿದಂತೆ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಿದ್ದರು ನಿವೃತ್ತ ಐಎಎಸ್ ಅಧಿಕಾರಿ ಪಿ.ಸೋಮಶೇಖರ ಸ್ಮರಿಸಿದ್ದಾರೆ.
ರವಿವಾರ ರಾಜಾಜಿನಗರದಲ್ಲಿ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಸಮಿತಿಯಿಂದ ಆಯೋಜಿಸಿದ್ದ ಶ್ರೀಗಳ ಪ್ರಥಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವೇದಿಕೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮಠಾಧೀಶರ ನಡುವೆ ನಿಸ್ವಾರ್ಥ ಸೇವೆಗಾಗಿ ಲಕ್ಷಾಂತರ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿದವರು ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಸಭೆ, ಸಮಾರಂಭಗಳಲ್ಲಿ ಕೆಲವು ಮಠಾಧಿಪತಿಗಳು ತಮ್ಮ ಸ್ವಾರ್ಥಕ್ಕಾಗಿ ಜನಪ್ರತಿನಿದಿಗಳಿಗೆ ಒತ್ತಡ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, ಕಾಯಕ, ದಾಸೋಹವೇ ಉಸಿರಾಗಿಸಿಕೊಂಡ ಶ್ರೀಗಳು ತಮ್ಮ 80 ವರ್ಷಗಳ ಕಾಯಕದ ಜೀವನದಲ್ಲಿ ಎಂದಿಗೂ ಯಾರನ್ನೂ ಬೇಡಲಿಲ್ಲ. ಸಮಾಜದಲ್ಲಿ ಭಕ್ತರಿಂದ ಭಿಕ್ಷೆಯನ್ನು ಎತ್ತಿ, ಲಕ್ಷಾಂತರ ದೀನ-ದಲಿತರ ಮಕ್ಕಳಿಗೆ ಶಿಕ್ಷಣದ ಮೂಲಕ ಜೀವನ ರೂಪಿಸಿದರು ಎಂದರು.
ಶ್ರೀಗಳ ಪ್ರೇರಣೆಯಂತೆ ನಡೆದುಕೊಂಡ ಶ್ರೀಗಳು, ಸಿದ್ದಗಂಗಾ ಮಠವನ್ನು ಹೆಮ್ಮರವಾಗಿ ಬೆಳೆಸಿದರು. ಲೌಕಿಕ ಬದುಕಿನ ವಿಚಾರಗಳನ್ನು ನಿರ್ಲಕ್ಷ್ಯ ಮಾಡಲಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನೂರಾರು ಶಾಲಾ ಕಾಲೇಜುಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಥಾಪಿಸಿದರಲ್ಲದೇ ಹಸಿದವರಿಗೆ ಅನ್ನ ಹಾಕಬೇಕೆಂಬ ಸದುದ್ದೇಶದಿಂದ ಮಠದಲ್ಲಿ ನಿರಂತರ ಅನ್ನ ದಾಸೋಹ ನಡೆಸುತ್ತಾ ಬಂದರು. ಅಂತಹ ಮಹಾಪುರುಷರ ಸ್ಮರಣೆ ಇಂದಿಗೂ ಪ್ರಸ್ತುತವಾಗಿದೆ. ಅವರ ಆಶೀರ್ವಾದ, ಕಾಯಕನಿಷ್ಠೆ ಎಲ್ಲರಿಗೂ ಪ್ರೇರಣೆಯಾಗಿಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ದಯಾನಂದ, ವೀರಶೈವ ಮುಖಂಡರಾದ ಪರಮಶಿವಯ್ಯ, ಡಾ. ಬಸವರಾಜ ಗುರೂಜಿ, ವಿರುಪಾಕ್ಷಪ್ಪ, ಮಧುರಾ ಅಶೋಕ ಕುಮಾರ ಉಪಸ್ಥಿತರಿದ್ದರು.







