ಪ್ರಧಾನಿ ಅಥವಾ ಗೃಹಸಚಿವರನ್ನು ಮೆಚ್ಚಿಸಲು ಚಿತ್ರ ನಿರ್ಮಾಣ ನಾಚಿಕೆಗೇಡು: ಬಾಲಿವುಡ್ ನಟ ಯಶಪಾಲ ಶರ್ಮಾ

ಹೊಸದಿಲ್ಲಿ,ಮಾ.1: ದಿಲ್ಲಿ ಹಿಂಸಾಚಾರವನ್ನು ನಿಭಾಯಿಸಿದ ರೀತಿ,ಸಿಎಎ ಅಂಗೀಕಾರ ಮತ್ತು ಎನ್‌ಆರ್‌ಸಿ ಭೀತಿಯನ್ನು ಸೃಷ್ಟಿಸಿದ್ದಕ್ಕಾಗಿ ಬಾಲಿವುಡ್ ಕಲಾವಿದ ಯಶಪಾಲ ಶರ್ಮಾ ಅವರು ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಜಕೀಯ ಬಯೊಪಿಕ್‌ಗಳನ್ನು ನಿರ್ಮಿಸುವ ಇತ್ತೀಚಿನ ಪ್ರವೃತ್ತಿಯನ್ನೂ ಯಾವುದೇ ಚಿತ್ರವನ್ನು ಹೆಸರಿಸದೆ ಟೀಕಿಸಿದ ಅವರು,ಯಾರನ್ನಾದರೂ ಮೆಚ್ಚಿಸಲು ಚಿತ್ರವೊಂದನ್ನು ನಿರ್ಮಿಸಲು ನಿರ್ದೇಶಕನೋರ್ವ ನಿರ್ಧರಿಸಿದರೆ ಅಂದೇ ಆತ ಸತ್ತಂತೆ. ಪ್ರಧಾನಿ ಅಥವಾ ಗೃಹಸಚಿವರನ್ನು ಮೆಚ್ಚಿಸಲು ಚಿತ್ರವೊಂದನ್ನು ಮಾಡಬೇಕು ಎಂದು ಅನ್ನಿಸಿದರೆ ಅದು ನಿರ್ದೇಶಕನ ಸೃಜನಶೀಲತೆಗೆ ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಸಿಎಎ ಮತ್ತು ಎನ್‌ಆರ್‌ಸಿಗೆ ತಾನು ವಿರುದ್ಧವಾಗಿದ್ದೇನೆ ಎಂದ ಅವರು,ಇವರೆಡೂ ಕಾಯ್ದೆಗಳನ್ನು ಸಮಗ್ರವಾಗಿ ತಿಳಿದುಕೊಂಡಿದ್ದೇನೆ ಎಂದು ತಾನು ಶೇ.100ರಷ್ಟು ನಿಖರವಾಗಿ ಹೇಳುವುದಿಲ್ಲ,ಆದರೆ ತನಗೆ ತಿಳಿದಿರುವಂತೆ ಈ ಕಾಯ್ದೆಗಳು ಜನರನ್ನು ಸರದಿ ಸಾಲುಗಳಲ್ಲಿ ನಿಲ್ಲುವ ಅಥವಾ ದಾಖಲೆಗಳಿಗಾಗಿ ಹುಡುಕಾಡುವ ಅರ್ಥಹೀನ ಚಟುವಟಿಕೆಗಳಲ್ಲಿ ವ್ಯಸ್ತವಾಗಿಸುತ್ತವೆ,ಹೀಗಾಗಿ ತಾನು ಅವುಗಳನ್ನು ವಿರೋಧಿಸುತ್ತೇನೆ. ಜನರು ನಿರುದ್ಯೋಗಿಗಳಾಗಿದ್ದಾರೆ ಎಂಬ ಮಾತ್ರಕ್ಕೆ ನೀವು ಅವರಿಗೆ ಇಂತಹ ಕೆಲಸಗಳನ್ನು ನೀಡುವುದಲ್ಲ. ಸರಿಯಾದ ಕೆಲಸ ನೀಡುವುದು ಉದ್ಯೋಗ ಸೃಷ್ಟಿಯಾಗಿದೆ ಎಂದರು.
ದಿಲ್ಲಿ ಹಿಂಸಾಚಾರಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾರಂತಹ ಕೆಲವು ರಾಜಕಾರಣಿಗಳ ದ್ವೇಷಪೂರ್ಣ ಭಾಷಣಗಳೇ ಮುಖ್ಯ ಕಾರಣ ಎಂದ ಅವರು,ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರವನ್ನು 2002ರ ಗುಜರಾತ್ ಕೋಮುಗಲಭೆಗೆ ಹೋಲಿಸಿದರು.







