ದೌರ್ಜನ್ಯ ಖಂಡಿಸಿ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರಿಂದ ವಿಶೇಷ ಕಾರ್ಯಕ್ರಮ: ಅನುಭವಗಳನ್ನು ಹಂಚಿಕೊಂಡ ಸಂತ್ರಸ್ತರು
ಬೆಂಗಳೂರು, ಮಾ.1: ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ರವಿವಾರ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ಮಂಟಪದಲ್ಲಿ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ನಾಟಕ, ಸಂಗೀತ, ಕವಿತೆ, ಹಾಡು, ಸಂವಾದ, ಕಥೆ ಹೇಳುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತ್ರಸ್ತ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಇತರರೊಂದಿಗೆ ಹಂಚಿಕೊಂಡರು. ವಿಶೇಷವಾಗಿ ತಮಗಾದ ಪ್ರೀತಿ, ಸಂಕಷ್ಟ, ಹಿಂಸೆ, ದೌರ್ಜನ್ಯ ಹಾಗೂ ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿ, ಸಹೋದ್ಯೋಗಿ, ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರಿಂದ ಎದುರಿಸುವ ದೌರ್ಜನ್ಯ, ಲೈಂಗಿಕ ಕಿರುಕುಳ ಒಳಗೊಂಡಂತೆ ವ್ಯಂಗ್ಯ ಮಾತು ಕುರಿತು ಮನಬಿಚ್ಚಿ ಮಾತನಾಡಿದರು.
ಲಾಭ ದೋಚುವ ಉದಾರವಾದ ಆರ್ಥಿಕತೆಯೊಂದಿಗೆ ರಾಜಕಾರಣ- ಧರ್ಮ- ಜಾತಿ ವ್ಯವಸ್ಥೆಯೂ ಕೈಜೋಡಿಸಿರುವುದರ ಪರಿಣಾಮವಾಗಿ, ಮಹಿಳೆಯರ ಮೇಲಿನ ಹಿಂಸೆಯ ಸ್ವರೂಪಗಳು ಸಂಕೀರ್ಣಗೊಳ್ಳುತ್ತಿರುವುದು ಅಷ್ಟೇ ಅಲ್ಲ. ಮಾಮೂಲಿ ವಿಷಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನೈತಿಕ ಪೊಲೀಸ್‌ಗಿರಿ, ಮರ್ಯಾದಾಹೀನ ಹತ್ಯೆ, ಜಾತಿ ಪಂಚಾಯತ್ ಗಳ ಮೂಲಕ ಮಹಿಳೆ ಧರ್ಮ, ಕೋಮು, ವೈಷ್ಯಮ್ಯ ದಾಳವಾಗಿ ಬಳಕೆಯಾಗುತ್ತಿದ್ದಾಳೆ ಎಂದು ಸಂತ್ರಸ್ತ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ತಿಳಿಸಿದರು.
ಸಲುಗೆಯ ದುರುಪಯೋಗ ಬೇಡ...
ನಾನು ನನ್ನ ಜತೆ ಕೆಲಸ ನಿರ್ವಹಿಸುವ ಹಲವು ವ್ಯಕ್ತಿಗಳಿಂದ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದೇನೆ. ಅವರು ಆ ರೀತಿ ಕಿರುಕುಳ ನೀಡಲು ನಾನು ಅವರಿಗೆ ನೀಡಿದ ಸಲುಗೆ ಇರಬಹುದು. ಯಾವೊಬ್ಬ ಮಹಿಳೆಯ ಸಲುಗೆಯನ್ನು ಪುರುಷರು ದುರುಪಯೋಗ ಪಡಿಸಿಕೊಳ್ಳಬಾರದು. ಈ ರೀತಿಯ ಘಟನೆಗಳಿಂದ ಮಹಿಳೆಯರು ಪ್ರತಿ ಪುರುಷರು ಹೀಗೆ ಅಂದುಕೊಳ್ಳಲು ಪ್ರಾರಂಭಿಸಿದರೆ, ಸಮಾಜದ ಹಿತ ಹದಗೆಡಲಿದೆ ಎಂದು ಲೈಂಗಿಕ ಅಲ್ಪಸಂಖ್ಯಾತರಾದ ರಮಾ ಹೇಳಿದರು.







