ಇನ್ನೆಂದೂ ನನಗೆ ಭಾಷಣ ಮಾಡಲು ಉತ್ಸಾಹ ಇರದು: ಭಾರತದಲ್ಲಿನ ಸಭಿಕರನ್ನು ನೆನೆದ ಟ್ರಂಪ್!

ವಾಶಿಂಗ್ಟನ್, ಮಾ. 1: ಪ್ರಧಾನಿ ನರೇಂದ್ರ ಮೋದಿ ಓರ್ವ ‘ಶ್ರೇಷ್ಠ ವ್ಯಕ್ತಿ’ ಹಾಗೂ ಅವರನ್ನು ಅವರ ದೇಶವಾಸಿಗಳು ಪ್ರೀತಿಸುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಸೌತ್ ಕ್ಯಾರಲೈನ ರಾಜ್ಯದಲ್ಲಿ ಚುನಾವಣ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತಕ್ಕೆ ನಾನು ಇತ್ತೀಚೆಗೆ ನೀಡಿರುವ ಭೇಟಿಯು ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.
ನನ್ನ ಭಾರತ ಭೇಟಿಯ ವೇಳೆ ಅಹ್ಮದಾಬಾದ್‌ನ ಮೊಟೇರ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ, ಇಲ್ಲಿ ನನಗೆ ಭಾಷಣ ಮಾಡಲು ಉತ್ಸಾಹವೇ ಇಲ್ಲ ಎಂದು ಅವರು ಹೇಳಿದರು.
‘‘ನಾನು ಭಾರತದ ಪ್ರಧಾನಿ ಮೋದಿಯೊಂದಿಗೆ ಇದ್ದೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಅವರನ್ನು ಭಾರತದ ಜನರು ಪ್ರೀತಿಸುತ್ತಾರೆ. ನಾವು ಬೃಹತ್ ಸಭೆಯನ್ನು ಉದ್ದೇಶಿಸಿ ಅಲ್ಲಿ ಮಾತನಾಡಿದೆವು. ಈಗ ಇಲ್ಲಿ ಸಮಸ್ಯೆ ಎದುರಾಗಿದೆ. ಇದು ಕೂಡ ದೊಡ್ಡ ಸಭೆಯೇ ಆಗಿದೆ. ಸಾಮಾನ್ಯವಾಗಿ ನಾನು ಉದ್ದೇಶಿಸಿ ಮಾತನಾಡುವ ಸಭೆಗಳ ಬಗ್ಗೆ ನನಗೆ ಅಭಿಮಾನವಿದೆ. ಯಾಕೆಂದರೆ, ಬೇರೆಯವರ ಸಭೆಗಿಂತ ಹೆಚ್ಚು ಜನರು ನನ್ನ ಸಭೆಗೆ ಬರುತ್ತಾರೆ. ಆದರೆ, 1.40 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ನಾನು ಇಲ್ಲಿಗೆ ಬರುತ್ತಿದ್ದೇನೆ’’ ಎಂದು ಟ್ರಂಪ್ ಹೇಳಿದರು.
‘‘ಭಾರತದಲ್ಲಿನ ನನ್ನ ಭಾಷಣ ಕೇಳಲು ನೆರೆದ ಸಭಿಕರ ಸಂಖ್ಯೆಯನ್ನು ನೋಡಿದ ಬಳಿಕ, ಇಲ್ಲಿ ಇನ್ನೆಂದೂ ಭಾಷಣ ಮಾಡಲು ನನಗೆ ಬಹುಷಃ ನನಗೆ ಉತ್ಸಾಹ ಇರದು. ಆದರೂ, ಇಲ್ಲಿನ ಸಭೆಯನ್ನು ನಾನು ಪ್ರೀತಿಸುತ್ತೇನೆ. ಅಲ್ಲಿನ ಸಭೆಯನ್ನೂ ನಾನು ಪ್ರೀತಿಸುತ್ತೇನೆ’’ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.







