ಹಿಂದೂಸೇನಾ ಬೆದರಿಕೆ ಹಿನ್ನೆಲೆ: ಶಾಹೀನ್‌ಭಾಗ್ ನಲ್ಲಿ ಸೆಕ್ಷನ್ 144 ಹೇರಿಕೆ

ಹೊಸದಿಲ್ಲಿ,ಮಾ.1: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಭಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ತೆರವುಗೊಳಿಸುವುದಾಗಿ ಹಿಂದೂ ಸೇನಾ ಸಂಘಟನೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ,ಮುಂಜಾಗರೂಕತಾ ಕ್ರಮವಾಗಿ ರವಿವಾರದಂದು ಆ ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿದೆ.
ಸೆಕ್ಷನ್ 144 ಹೇರಿರುವ ಹಿನ್ನೆಲೆಯಲ್ಲಿ ಜನತೆ ಆ ಪ್ರದೇಶದಲ್ಲಿ ಜಮಾಯಿಸಕೂಡದೆಂದು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 144 ಅನ್ನು ಶಾಹೀನ್‌ಭಾಗ್ ಪ್ರದೇಶದಲ್ಲಿ ಹೇರಲಾಗಿದೆ. ಹಗೂ ಹೀಗಾಗಿ ಅಲ್ಲಿ ಜನರು ಜಮಾಯಿಸುವುದಕ್ಕೆ ಅನುಮತಿ ನೀಡಲಾಗಿಲ್ಲ. ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಿಲ್ಲಿ ಪೊಲೀಸರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಬಹುತೇಕ ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯ ಜನರು ಶಾಹೀನ್‌ಭಾಗ್ ಪ್ರದೇಶದಲ್ಲಿ ಕಳೆದ ವರ್ಷದ ಡಿಸೆಂಬರ್ ಮಧ್ಯದಿಂದೀಚೆಗೆ ಧರಣಿ ನಡೆಸುತ್ತಿದ್ದಾರೆ.
ಶಾಹೀನ್‌ಭಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಾರ್ಚ್ 1ರಂದು ಸ್ಥಳದಿಂದ ತೆರವುಗೊಳ್ಳದೆ ಇದ್ದಲ್ಲಿ ಅವರ ವಿರುದ್ಧ ತಾನು ಪ್ರತಿಭಟನೆ ನಡೆಸುವುದಾಗಿ ಹಿಂದೂ ಸೇನಾ ಎಚ್ಚರಿಕೆ ನೀಚಿತ್ತು. ಆದರೆ ಆನಂತರ ಅದು ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು.







