ದಿಲ್ಲಿ, ತೆಲಂಗಾಣದಲ್ಲಿ ಎರಡು ಕೊರೊನಾ ವೈರಸ್ ಪ್ರಕರಣ ಪತ್ತೆ

ಹೊಸದಿಲ್ಲಿ : ಭಾರತದಲ್ಲಿ ಇನ್ನೂ ಎರಡು ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದು ಪ್ರಕರಣ ದಿಲ್ಲಿಯಿಂದ ವರದಿಯಾಗಿದ್ದರೆ, ಇನ್ನೊಂದು ತೆಲಂಗಾಣದಿಂದ ವರದಿಯಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ.
ಕೇರಳದಲ್ಲಿ ಒಂದು ತಿಂಗಳ ಹಿಂದೆ ಪತ್ತೆಯಾದ ದೇಶದ ಮೊದಲ ಕೊರೊನಾ ವೈರಸ್ ಪ್ರಕರಣದ ನಂತರ ಭಾರತದಲ್ಲಿ ವರದಿಯಾದ ಒಟ್ಟು ಪ್ರಕರಣಗಳು ಈಗ ಐದಕ್ಕೆ ಏರಿಕೆಯಾಗಿವೆ.
ದಿಲ್ಲಿ ಹಾಗೂ ತೆಲಂಗಾಣದ ಕೊರೊನಾ ವೈರಸ್ ರೋಗಿಗಳಿಬ್ಬರ ಸ್ಥಿತಿ ಸ್ಥಿರವಾಗಿದೆ ಹಾಗೂ ವೈದ್ಯರ ತಂಡ ಅವರಿಬ್ಬರ ಮೇಲೆ ನಿಗಾ ಇಟ್ಟಿದೆ ಎಂದು ಸರಕಾರ ತಿಳಿಸಿದೆ. ದಿಲ್ಲಿಯ ರೋಗಿ ಇಟಲಿಗೆ ಹೋಗಿ ಬಂದವರಾಗಿದ್ದರೆ, ತೆಲಂಗಾಣದವರು ದುಬೈಗೆ ಹೋಗಿ ಬಂದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ಈ ಹಿಂದೆ ಕೊರೊನಾ ವೈರಸ್ ಬಾಧಿತರು ಎಂದು ಗುರುತಿಸಲ್ಪಟ್ಟಿದ್ದ ಮೂವರು ವಿದ್ಯಾರ್ಥಿಗಳ ಕೊರೊನಾ ವೈರಸ್ ಪರೀಕ್ಷೆ ನೆಗೆಟಿವ್ ವರದಿ ಬಂದ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
Next Story





