ಪ್ರತಿಭಟನಾ ಸ್ಥಳಕ್ಕೆ ನಿಷೇಧ ಹೇರಿಕೆ ಆದೇಶ ಸರ್ವಾಧಿಕಾರದ ಕ್ರಮ: ಪಿ.ಎಫ್.ಐ.

ಬೆಂಗಳೂರು, ಮಾ.2: ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಕ್ಕೆ ನಿಷೇಧ ಹೇರಿ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿರುವುದು ಸರ್ವಾಧಿಕಾರದ ಕ್ರಮವಾಗಿದೆ. ಪ್ರಜಾಪ್ರಭುತ್ವದ ಅಂತಃಸತ್ವಕ್ಕೆ ಮಾರಕವಾಗಿರುವ ಇಂತಹ ಧೋರಣೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಭಟನಾ ಸಮಾವೇಶವನ್ನು 144 ಸೆಕ್ಷನ್ ಹಾಕುವ ಮೂಲಕ ಹತ್ತಿಕ್ಕುತ್ತಿದ್ದ ಸಂವಿಧಾನ ವಿರೋಧಿ ಮನೋಸ್ಥಿತಿಯ ಆಡಳಿತ ವ್ಯವಸ್ಥೆಯು ಇದೀಗ ಪ್ರತಿಭಟನಾ ಸ್ಥಳಕ್ಕೆ ಸುಳ್ಳು ನೆಪಗಳನ್ನು ಒಡ್ಡಿ ಸಂಪೂರ್ಣವಾಗಿ ನಿಷೇಧ ಹೇರಿರುವುದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಇಂತಹ ಫ್ಯಾಶಿಸ್ಟ್ ಕೃತ್ಯಗಳನ್ನು ನಾಗರಿಕ ಸಮಾಜವು ಒಕ್ಕೊರಲಿನಿಂದ ಪ್ರತಿಭಟಿಸಬೇಕು ಎಂದು ನಾಸಿರ್ ಪಾಶ ಕರೆ ನೀಡಿದ್ದಾರೆ.
ದೇಶಾದ್ಯಂತವು ಪ್ರತಿಭಟನೆಯು ನಿರಂತರವಾಗಿದ್ದು ಸಣ್ಣ ಸಣ್ಣ ಪ್ರತಿಭಟನೆಗಳು ಇತ್ತೀಚಿನ ದಿನಗಳಲ್ಲಿ ಜನಾಂದೋಲನವಾಗಿ ಶಕ್ತಿ ಪಡೆಯುತ್ತಿದೆ. ಫ್ಯಾಶಿಸ್ಟ್ ಆಡಳಿತವು 144 ಸೆಕ್ಷನ್, ಗೋಲಿಬಾರ್, ಲಾಠಿಚಾರ್ಜ್ ಅಥವಾ ಪ್ರಾಯೋಜಿತ ಗಲಭೆಗಳ ಮೂಲಕ ಪ್ರತಿಭಟನಾಕಾರರನ್ನು ದಮನಿಸುವ ಕೃತ್ಯದಲ್ಲಿ ತೊಡಗಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಪುರಭವನದ ಮುಂಭಾಗದ ಪ್ರತಿಭಟನಾ ಸ್ಥಳಗಳಿಗೆ ನಿಷೇಧ ಹೇರಿದೆ. ಇಂತಹ ಕ್ರಮಗಳ ವಿರುದ್ಧವೂ ಕಾನೂನು ಹೋರಾಟವನ್ನು ನಡೆಸಿ ಜನರ ಹಕ್ಕನ್ನು ಉಳಿಸಿಕೊಳ್ಳುವತ್ತ ಹೋರಾಟವನ್ನು ಮುಂದುವರಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ.







