'ಗೋಲಿ ಮಾರೋ' ಘೋಷಣೆ ಸಹಿಸಲು ಇದು ದಿಲ್ಲಿಯಲ್ಲ, ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಗುಡುಗು

ಕೊಲ್ಕತ್ತಾ: ಕೊಲ್ಕತ್ತಾದ ಶಹೀದ್ ಮಿನಾರ್ ಮೈದಾನದಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಿಎಎ ಪರ ರ್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಕೂಗಿದ 'ಗೋಲಿ ಮಾರೋ' ಘೋಷಣೆಗಳ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
"ಕೊಲ್ಕತ್ತಾದ ಬೀದಿಗಳಲ್ಲಿ ಈ ಘೋಷಣೆ ಕೂಗಿದವರನ್ನು ಖಂಡಿಸುತ್ತೇನೆ. ಇದು ದಿಲ್ಲಿಯಲ್ಲ, ನಾವು ಇದನ್ನು ಸಹಿಸುವುದಿಲ್ಲ, ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದಾರೆ.
"ಏನಾದರೂ ಅಕ್ರಮ ನಡೆಸಿದ್ದೀರೆಂದಾದರೆ ಅದರ ಪರಿಣಾಮವನ್ನು ಎದುರಿಸಲೇಬೇಕು. ಪೊಲೀಸರು ಈಗಾಗಲೇ ಮೂರು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲೂ ಕ್ರಮ ಕೈಗೊಳ್ಳುತ್ತಾರೆ'' ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು 'ನರಮೇಧ' ಎಂದು ಬಣ್ಣಿಸಿದ ಮಮತಾ, ಹಲವು ಜೀವಗಳನ್ನು ಬಲಿ ಪಡೆದ ಈ ಘಟನಾವಳಿ ತಮಗೆ ತೀವ್ರ ದುಃಖ ತಂದಿದೆ ಎಂದಿದ್ದಾರೆ.
"ದಿಲ್ಲಿ ಹಿಂಸಾಚಾರ ಒಂದು ಪೂರ್ವಯೋಜಿತ ನರಮೇಧ. ದಿಲ್ಲಿ ಪೊಲೀಸರ ಮೇಲೆ ಕೇಂದ್ರ ಸರಕಾರಕ್ಕೆ ಸಂಪೂರ್ಣ ಹಿಡಿತವಿದೆ. ಅವರ ಅಧೀನದಲ್ಲಿ ಸಿಆರ್ ಪಿಎಫ್, ಸಿಐಎಸ್‍ಎಫ್ ಹಾಗೂ ಸೇನೆ ಇದೆ. ಆದರೂ ಈ ಘಟನೆ ಹೇಗಾಯಿತು?, ಹಲವಾರು ಜನರು ನಾಪತ್ತೆಯಾಗಿದ್ದಾರೆಂಬ ಮಾತಿದೆ. ಅವರ ಸಂಖ್ಯೆ 700ಕ್ಕೂ ಅಧಿಕವಿರಬಹುದೆಂದು ಹೇಳಲಾಗುತ್ತಿದೆ. ಅವರೆಲ್ಲರೂ ಚೆನ್ನಾಗಿದ್ದಾರೆಂದು ನಂಬಿದ್ದೇನೆ'' ಎಂದು ಮಮತಾ ಹೇಳಿದರು.
"ಗುಜರಾತ್ ಮಾದರಿ ಹಿಂಸಾಚಾರವನ್ನು ದೇಶಾದ್ಯಂತ ಕಾರ್ಯರೂಪಕ್ಕೆ ತರಲು ಬಿಜೆಪಿ ಯತ್ನಿಸುತ್ತಿದೆ" ಎಂದು ಮಮತಾ ಆರೋಪಿಸಿದರು.







