ಭಟ್ಕಳ: 'ಲೈಫ್ ಕೇರ್' ಆರೋಗ್ಯ ಕೇಂದ್ರ ಉದ್ಘಾಟನೆ

ಭಟ್ಕಳ: ಇಲ್ಲಿನ ರಾ.ಹೆ.66 ಸಮೀಪ ಜಾಲಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲೈಫ್ ಕೇರ್ ಆರೋಗ್ಯ ಕೇಂದ್ರವನ್ನು ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಅವರು ಪ್ರಾರ್ಥನೆ ಮಾಡುವುದರ ಮೂಲಕ ರವಿವಾರ ಉದ್ಘಾಟಿಸಿದರು.
ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಲೈಫ್ ಕೇರ್ ಸೆಂಟರ್ ಭಟ್ಕಳದಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆರಂಭಗೊಂಡಿದ್ದು ಇಲ್ಲಿ ವಿವಿಧ ಸೌಲಭ್ಯಗಳು ಮತ್ತು ಸೇವೆಗಳನ್ನು ನೀಡಲಾಗುತ್ತದೆ. ಇಂತಹ ವ್ಯವಸ್ಥೆಯು ಭಟ್ಕಳದ ಸುತ್ತಮುತ್ತ ಎಲ್ಲಿಯೂ ಇರುವುದಿಲ್ಲ ಆದ್ದರಿಂದ ಉತ್ತರಕನ್ನಡ ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೌಲಾನ ಈ ಸಂದರ್ಭ ಕರೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಭಟ್ಕಳದ ನವಾಯತ್ ಸಮುದಾಯದ ಹಿರಿಯ ವೈದ್ಯ ಡಾ. ಸಿಬಗತುಲ್ಲಾ ಮಾತನಾಡಿ ಇಂತಹ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾದ ಸಂಘಟಕರನ್ನು ಅಭಿನಂದಿಸಿ ಶುಭ ಹಾರೈಸಿದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಭಟ್ಕಳ ಪರಿಸರದಲ್ಲಿ ಇಂತಹದ್ದೊಂದು ಆರೋಗ್ಯ ಕೇಂದ್ರದ ಅವಶ್ಯಕತೆ ಇತ್ತು ಈ ಲೈಫ್ ಕೇರ್ ಮೂಲಕ ಅದು ಪೂರ್ಣಗೊಂಡಂತಾಗಿದೆ. ಈ ಪ್ರದೇಶದ ಜನರ ಆರೋಗ್ಯ ಕಾಪಾಡುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ ಎಂದರು.
ಮಜ್ಲಿಸ್-ಇ-ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಎಸ್.ಎಂ. ಪರ್ವೇಝ್ ಮಾತನಾಡಿದರು. ಲೈಫ್ ಕೇರ್ ಸೆಂಟರ್ ಇದರ ಪಾಲುದಾರ ಇಸ್ಮಾಯಿಲ್ ಜುಕಾಕು, ಯೋಜನೆಯ ಬಗ್ಗೆ ಬೆಳಕು ಚೆಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಯಾವ ರೀತಿಯಲ್ಲಿ ವಿಸ್ತರಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಒತ್ತಿ ಹೇಳಿದರು. ಈ ಕ್ಷೇತ್ರದಲ್ಲಿ ಹೆಚ್ಚಿನ ಖಾಸಗಿ ಸಂಸ್ಥೆಗಳು ಬರಬೇಕು ಮತ್ತು ನಗರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮಂಗಳೂರು ಮತ್ತು ಚೆನ್ನೈನಂತಹ ನಗರಗಳ ಕಡೆಗೆ ಮುಖ ಮಾಡದೆ ಸ್ಥಳೀಯವಾಗಿರುವ ಸಂಸ್ಥೆಗಳನ್ನು ಬೆಳೆಸುವುದರ ಕಡೆಗೆ ಗಮನ ಕೇಂದ್ರಿಕರಿಸಬೇಕು ಮತ್ತು ಲೈಫ್ ಕೇರ್ ಮತ್ತು ಆರೋಗ್ಯ ಕೇಂದ್ರವನ್ನು ಬೆಂಬಲಿಸಬೇಕು ಮತ್ತು ವೈದ್ಯಕೀಯ ಸಮಸ್ಯೆಗಳಿಗಾಗಿ ಅಂತಹ ನಗರಗಳಿಗೆ ತಿರುಗುವ ಪ್ರವೃತ್ತಿಯನ್ನು ಬಿಡಬೇಕು ಎಂದು ಜನರಿಗೆ ಕರೆ ನೀಡಿದರು.
ಅಪಘಾತ ಮತ್ತು ತುರ್ತು, ಹೈಟೆಕ್ ಪ್ರಯೋಗಾಲಯ, ವಿಶೇಷ ಭೌತಚಿಕಿತ್ಸೆಯ ಘಟಕ, ಸುಧಾರಿತ ದಂತ ಮತ್ತು ಇಂಪ್ಲಾಂಟ್‍ಗಳಲ್ಲಿ ಪರಿಣಿತ ಒಪಿಡಿ ಸೇವೆಗಳನ್ನು ಸ್ತ್ರೀರೋಗ ವಿಭಾಗದ ಡೇ ಕೇರ್ ಜೊತೆಗೆ ಕೇಂದ್ರವು ಭರವಸೆ ನೀಡುತ್ತದೆ. ಡೇ ಕೇರ್ ಸೇವೆಗಳಲ್ಲಿ ಹೆಚ್ಚಿನ ಇಲಾಖೆಗಳನ್ನು ವಿಸ್ತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.











