ಸಂಶೋಧಕ ಷ.ಶೆಟ್ಟರ್, ಮಾಜಿ ಸಚಿವ ಚನ್ನಿಗಪ್ಪ ಸೇರಿ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ಮಾ. 2: ಇತ್ತೀಚೆಗೆ ನಿಧನರಾದ ಹಿರಿಯ ಸಂಶೋಧಕ ಷ.ಶೆಟ್ಟರ್, ಮಾಜಿ ಸಚಿವ ಚನ್ನಿಗಪ್ಪ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಧಾಕರ್ ಚತುರ್ವೇದಿ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಚನ್ನಿಗಪ್ಪ, ಸುಧಾಕರ್ ಚತುರ್ವೇದಿ ಹಾಗೂ ಷ.ಶೆಟ್ಟರ್ ಸೇರಿ ಮೂವರ ಗಣ್ಯರ ನಿಧನದ ಸುದ್ದಿಯನ್ನು ಸದನಕ್ಕೆ ತಿಳಿಸಿ ವಿಷಾದ ವ್ಯಕ್ತಪಡಿಸಿದರು.
ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಗಲಿದ ಮೂವರು ಗಣ್ಯರನ್ನು ಸ್ಮರಿಸಿದರು. ಅಲ್ಲದೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಕ್ಷೇತ್ರ ಶೂನ್ಯ: ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕನ್ನಡ ಸಾಹಿತ್ಯ ಮತ್ತು ಸಂಶೋಧನ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದ್ದ ಹಿರಿಯ ಸಂಶೋಧಕ ಷ.ಶೆಟ್ಟರ್ ನಿಧನದಿಂದ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಶೂನ್ಯ ಆವರಿಸಿದೆ ಎಂದು ಶೆಟ್ಟರ್ ಅವರನ್ನು ಸ್ಮರಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಸಮಾಜ ಪರಿವರ್ತನೆ ಹೋರಾಟದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಯುವಕರಿಗೆ ಸ್ಫೂರ್ತಿಯಾಗಿದ್ದರು. ಅವರ ಸಾಮಾಜಿಕ ಕಳಕಳಿ, ಅಸ್ಪಶ್ಯತೆ ನಿವಾರಣೆ ಚಿಂತನೆ ಮಾದರಿ ಎಂದು ನೆನಪು ಮಾಡಿಕೊಂಡರು.
ಸಾಮಾನ್ಯರಂತೆ ಇದ್ದರು: ರೈತರು ಸಿಕ್ಕರೆ ರೈತ, ದಲಿತ ವ್ಯಕ್ತಿ ಸಿಕ್ಕರೆ ಅಸ್ಪಶ್ಯರಂತೆಯೇ ಇರುತ್ತಿದ್ದ ಚನ್ನಿಗಪ್ಪ ಸಚಿವರಾಗಿದ್ದರೂ ಸಾಮಾನ್ಯರಂತೆ ಇದ್ದರು. ಅವರು ಮೂರು ಬಾರಿ ಶಾಸಕರಾಗಿದ್ದರೂ ಯಾವುದೇ ಅಹಂ ಇರಲಿಲ್ಲ. ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಜೆಡಿಎಸ್ ಸದಸ್ಯ ಡಾ.ಅನ್ನದಾನಿ, ಚನ್ನಿಗಪ್ಪರನ್ನು ನೆನೆದರು.
ಕಾಂಗ್ರೆಸ್ ಸದಸ್ಯ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ ಶಿವಲಿಂಗೇಗೌಡ, ಶ್ರೀನಿವಾಸಮೂರ್ತಿ ಸೇರಿದಂತೆ ಇನ್ನಿತರರು ಅಗಲಿದ ಗಣ್ಯರ ಗುಣಗಾನ ಮಾಡಿದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಸಚಿವ ಚನ್ನಿಗಪ್ಪ ಅವರ ನಿವಾಸ ಒಂದು ರೀತಿಯಲ್ಲಿ ಅನ್ನಛತ್ರವೇ ಆಗಿತ್ತು. ಅವರ ಮನೆಯಲ್ಲಿ ನಿತ್ಯ ದಾಸೋಹ ಇರುತ್ತಿತ್ತು. ನಾನು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಜನಪ್ರಿಯತೆಗೆ ಸಾಕ್ಷಿ. ಜನಮನ್ನಣೆ ಗಳಿಸಿದ್ದ ವ್ಯಕ್ತಿ ಇನ್ನೂ ಕೆಲದಿನ ನಮ್ಮೊಂದಿಗೆ ಇರಬೇಕಿತ್ತು
-ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ







