ಸರಕಾರ ಭಾಷೆ, ಸಂಸ್ಕೃತಿ ಕ್ರೀಡೆಯ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ: ಡಾ.ಮೋಹನ್ ಆಳ್ವ

ಚಿಕ್ಕಮಗಳೂರು, ಮಾ.2: ಕಲೆ ಮತ್ತು ಸಂಸ್ಕೃತಿಯ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವವರಿಂದ ನಾಡಿನಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಸಾಧ್ಯವಿದೆ. ಇದರಿಂದಲೇ ಯುವಜನತೆಯಲ್ಲಿ ದೇಶಪ್ರೇಮದ ಸಂದೇಶ ಸಾರಲೂ ಸಾಧ್ಯವಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿಪ್ರಾಯಿಸಿದರು.
ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರವಿವಾರ ರಾತ್ರಿ ಆಯೋಜಿಸಿದ್ದ ಜಿಲ್ಲಾ ಉತ್ಸವ-2020 ಕಾರ್ಯಕ್ರಮದ ಅಂತಿಮ ದಿನದಂದು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಸನ್ಮಾನ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಹಿಂದಿನಿಂದಲೂ ತಮ್ಮ ಅನುಭವಗಳ ಹಾಗೂ ಪ್ರಾಯೋಗಿಕವಾಗಿ ಅನುಭವಿಸಿದ ಕಲೆ ಮತ್ತು ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಉಳಿಸಿ ಹೋಗಿದ್ದಾರೆ. ನಮ್ಮ ಜಾತಿ, ಭಾಷೆಗಳಿಗೆ ಅನುಗುಣವಾಗಿ ಕಲೆ, ಸಂಸ್ಕೃತಿ ನಾಡಿನುದ್ದಕ್ಕೂ ವಿಸ್ತಾರವಾಗಿ ಹಬ್ಬಿದೆ. ಇದನ್ನು ಈ ಹಿಂದೆ ರಾಜ ಮಹಾರಾಜರು ಬೆಳೆಸಿ ಪೋಷಿಸಿದ್ದು, ಸದ್ಯ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸಹಕಾರದೊಂದಿಗೆ ಜೊತೆಗೂಡಿ ಇಂತಹ ಅಪೂರ್ವ ಕಲೆ ಸಂಸ್ಕೃತಿಯನ್ನು ನಾವೆಲ್ಲರೂ ಬೆಳೆಸಿ ಪೋಷಣೆ ಮಾಡುವ ಅಗತ್ಯವಿದೆ ಎಂದರು.
ನಾಡಿನ ಸಂಸ್ಕೃತಿ, ಕಲೆಗಳನ್ನು ಅನಾವರಣಗೊಳಿಸುವ ಜಿಲ್ಲಾ ಉತ್ಸವವು ಕೇವಲ ಸರಕಾರಿ ಕಾರ್ಯಕ್ರಮವಾಗದೇ ಜನರ ಸಹಕಾರದೊಂದಿಗೆ ನಡೆದ ಉತ್ಸವವಾಗಿದೆ. ಈ ಹಿಂದೆ ನನ್ನ ಬದುಕಿನಲ್ಲಿ ಈ ರೀತಿಯ ಉತ್ಸವವನ್ನು ಹಿಂದೆ ಎಲ್ಲೂ ಕಂಡಿರಲಿಲ್ಲ ಎಂದ ಅವರು, ಸರಕಾರ ನನಗೆ ಕನ್ನಡ ಭಾಷೆ, ಸಂಸ್ಕೃತಿ ಕ್ರೀಡೆಯನ್ನು ಉಳಿಸಿ ಬೆಳೆಸಲು ಜವಾಬ್ದಾರಿಯನ್ನು ಕೊಟ್ಟಲ್ಲಿ ಅದನ್ನು ನಿಷ್ಠೆಯಿಂದ ಯಾವುದೇ ಪ್ರತಿಫಲ ಇಲ್ಲದೇ ಮಾಡುತ್ತೇನೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಉತ್ಸವ ಸಂಪೂರ್ಣವಾಗಿ ಜನಪದ ಕಲೆ, ಸಂಸ್ಕೃತಿಯ ಸಾಮರಸ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ಉಳಿಸಿ ಬೆಳೆಸುವ ಕಾರ್ಯ ಮಾಡಿದೆ. ಸರಕಾರ, ಜಿಲ್ಲಾಡಳಿತದ ಆಶಯದಂತೆಯೇ ಮೂರು ದಿನಗಳ ಕಾಲ ನಡೆದ ಈ ಉತ್ಸವ ಕಡಿಮೆ ಬಜೆಟ್‍ನಲ್ಲಿಯೇ ಅದ್ಧೂರಿಯಾಗಿ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ತರೀಕೆರೆ ತಾಲೂಕಿನ ಗೊ.ರು.ಚನ್ನಬಸಪ್ಪ, ಸಂಗೀತ ಕ್ಷೇತ್ರದಲ್ಲಿ ಕೊಪ್ಪದ ಬಿ.ಕೆ.ಸುಮಿತ್ರಾ, ವೈದ್ಯಕೀಯ ಕ್ಷೇತ್ರದಲ್ಲಿ ಚಿಕ್ಕಮಗಳೂರು ತಾಲೂಕಿನ ಡಾ.ಬಿ.ಟಿ.ರುದ್ರೇಶ್, ಸಂಗೀತ ಕ್ಷೇತ್ರದಲ್ಲಿ ಅಜ್ಜಂಪುರದ ಬಿ.ವಿ.ರಾಜಾರಾಮ್, ಕ್ರೀಡೆಯಲ್ಲಿ(ಮಹಿಳಾ ಕ್ರಿಕೆಟ್)ಕಡೂರಿನ ಕುಮಾರಿ ವೇದಾ ಕೃಷ್ಣಮೂರ್ತಿ ಅವರ ಪರವಾಗಿ ಅವರ ತಂದೆ, ಪ್ಯಾರಾ ಒಲಂಪಿಕ್ಸ್ ಕ್ರೀಡೆಯಲ್ಲಿ ಕೊಪ್ಪದ ಸವಾದ್ ಹಾಗೂ ಮೂಡಿಗೆರೆಯ ಕುಮಾರಿ ರಕ್ಷಿತಾ ಬಾಳೂರು, ಕುಸ್ತಿಯಲ್ಲಿ ಚಿಕ್ಕಮಗಳೂರಿನ ಗುರುಸಿದ್ಧಪ್ಪ, ಕನ್ನಡ ಸೇವೆಯಲ್ಲಿ ಮೂಡಿಗೆರೆಯ ಡಾ.ವಿಶ್ವಾಮಿತ್ರ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ಡಾ.ಬಿ.ಎಂ.ಪುಟ್ಟಯ್ಯ, ಕೃಷಿ ಕ್ಷೇತ್ರದಲ್ಲಿ ಅಜ್ಜಂಪುರ ಕಾಶಿನಾಥ್ ಗಿರಿಯಾಪುರ, ಸೂಕ್ಷ್ಮ ಕಲೆ(ಮೈಕ್ರೋ ಆರ್ಟ್) ಕ್ಷೇತ್ರದಲ್ಲಿ ಎಸ್.ಎನ್.ವೆಂಕಟೇಶ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಎಚ್.ಎಲ್ ನಾಗರಾಜ್, ತಾಪಂ ಅಧ್ಯಕ್ಷ ಜಯಣ್ಣ ನೆಟ್ಟೆಕೆರೆಹಳ್ಳಿ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸುಸಂಸ್ಕೃತ ವಾತಾವರಣ ನಿರ್ಮಾಣ ಮಾಡುವುದು ವ್ಯಕ್ತಿಗತ ನೆಲೆಯಲ್ಲಿ ಸಾಧ್ಯವಿಲ್ಲ, ಸಾಮೂಹಿಕ ನೆಲೆಯಲ್ಲಿ ವೇದಿಕೆಯನ್ನು ಕಲ್ಪಿಸಿ ಅವಕಾಶ ಮಾಡಿಕೊಟ್ಟಾಗ ಇದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಚಿಕ್ಕಮಗಳೂರು ಹಬ್ಬ ಆಯೋಜಿಸಲಾಯಿತು. ಗ್ರಾಮೀಣ ಕ್ರೀಡಾ ಕೂಟದಿಂದ ವಾಯು, ಜಲ, ನೆಲ ಸಾಹಸ ಕ್ರೀಡೋತ್ಸವಗಳು, ಚಲನಚಿತ್ರೋತ್ಸವ, ಜಾನಪದ ನೃತ್ಯ, ಆಳ್ವಾಸ್ ನುಡಿಸಿರಿ ವಿರಾಸತ್, ಸಾಂಸ್ಕೃತಿಕ ಸಂಗೀತೋತ್ಸವ ಕಾಫಿನಾಡಿನ ಮನ ಗೆದ್ದಿದೆ. ಕಲೆ, ಸಂಸ್ಕೃತಿ ಬಗ್ಗೆ ಅಪಾರ ಗೌರವ, ಕಾಳಜಿ ಇರುವ ಸಂಘ ಸಂಸ್ಥೆಗಳು, ಅಧಿಕಾರಿಗಳಿಂದಾಗಿ ಉತ್ಸವ ಯಶಸ್ವಿಯಾಗಿದೆ. ಜನರು ಸಂಭ್ರಮಿಸಿದ್ದಾರೆ.
- ಸಿ.ಟಿ.ರವಿ, ಸಚಿವ







