ರಂಗಹಬ್ಬ ಸಮಾರೋಪ: ‘ಯಕ್ಷಸುಮ’ ಪ್ರಶಸ್ತಿ ಪ್ರದಾನ

ಉಡುಪಿ, ಮಾ.2: ಸುಮನಸಾ ಕೊಡವೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕೃತಿ ನಿದೇರ್ಶನಾಲಯ ನವದೆಹಲಿ, ನಗರಸಭೆ ಉಡುಪಿ, ಪೇಜಾವರ ಮಠದ ಸಹಕಾರದೊಂದಿಗೆ ಒಂದು ವಾರ ಕಾಲ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜರಗಿದ ರಂಗಹಬ್ಬ-8ರ ಸಮಾರೋಪ ಸವಾರಂಭ ರವಿವಾರ ಸಂಜೆ ನಡೆಯಿತು.
ಸಮಾರೋಪದಲ್ಲಿ ಯು. ದುಗ್ಗಪ್ಪ ಸಂಸ್ಮರಣೆಯ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ನಾರಾಯಣ ಬನ್ನಂಜೆ ಅವರಿಗೆ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿ ಉಡುಪಿ ಸಹಾಯಕ ಮಹಾ ಪ್ರಬಂಧಕ ಬಿ.ಜಿ.ಸಾಮಗ ಮಾತನಾಡಿ, ಕಲೆಯು ವೈಶಿಷ್ಟ್ಯ ಮತ್ತು ವೈವಿಧ್ಯವಾದುದು. ಅದು ದೈವದತ್ತ, ಅವಕಾಶ, ಪ್ರೋತ್ಸಾಹದಿಂದ ಪ್ರಕಟ ಗೊಳ್ಳುತ್ತದೆ. ಕಲಾ ಪ್ರೌಢಿಮೆಗೆ ಸಾಕಷ್ಟು ಸಾಧನೆಯೂ ಅವಶ್ಯ. ಇದು ಪ್ರಾಪಂಚಿಕ ಜ್ಞಾನ, ವ್ಯವಹಾರ ಜ್ಞಾನವನ್ನೂ ನೀಡುತ್ತದೆ. ಕಲೆಯಿದ್ದಾಗ ಬದುಕಿಗೆ ಸ್ವಾರಸ್ಯ ಹಾಗೂ ಗೌರವ ಬರುತ್ತದೆ ಎಂದರು.
ಇದೇ ವೇಳೆ ರಂಗ ನಿರ್ದೇಶಕ, ಕವಿ ಗುರುರಾಜ್ ಮಾರ್ಪಳ್ಳಿ ಅವರ ಲಹರಿಯ ಕಡಲು ಕವನ ಸಂಕಲನವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಗುರುರಾಜ್ ಮಾರ್ಪಳ್ಳಿ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಅಂಬಲಪಾಡಿ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಗಳಿಗೆ ಏರ್ಪಡಿಸಲಾದ ಏಕಪಾತ್ರಾಭಿನಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಭಾಸ್ಕರ್ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕೃತಿಯ ಕುರಿತು ಮಾತನಾಡಿದರು. ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ದಯಾನಂದ ಯು. ಕರ್ಕೇರ ವಂದಿಸಿದರು. ಪ್ರವೀಣ್‌ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ತಂಡದಿಂದ ‘ಪುಟುಗೋಸಿ ಮನುಷ್ಯ’ ನಾಟಕ ಪ್ರದರ್ಶನ ಗೊಂಡಿತು.







