ಲಾದನ್ ಹತ್ಯೆಗೆ ನೆರವು ನೀಡಿದ್ದ ಪಾಕ್ ವೈದ್ಯನಿಂದ ಉಪವಾಸ ಸತ್ಯಾಗ್ರಹ

ಇಸ್ಲಾಮಾಬಾದ್, ಮಾ. 2: ಅಲ್-ಖಾಯಿದಾ ಭಯೋತ್ಪಾದಕ ಗುಂಪಿನ ಸ್ಥಾಪಕ ಉಸಾಮ ಬಿನ್ ಲಾದನ್‌ನನ್ನು ಪತ್ತೆಹಚ್ಚಿ ಕೊಲ್ಲಲು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ನೆರವು ನೀಡಿದ್ದ ಪಾಕಿಸ್ತಾನಿ ವೈದ್ಯ ತನ್ನ ಜೈಲು ಕೋಣೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಅವರ ವಕೀಲ ಮತ್ತು ಕುಟುಂಬ ಸದಸ್ಯರು ಸೋಮವಾರ ಹೇಳಿದ್ದಾರೆ.
ವೈದ್ಯ ಶಕೀಲ್ ಅಫ್ರಿದಿಯ ನಕಲಿ ಲಸಿಕೆ ಕಾರ್ಯಕ್ರಮವು 2011ರಲ್ಲಿ ಅಲ್-ಕಾಯಿದಾ ಮುಖ್ಯಸ್ಥನನ್ನು ಪತ್ತೆಹಚ್ಚಿ ಕೊಲ್ಲಲು ಸಿಐಎ ಏಜಂಟರಿಗೆ ನೆರವಾಗಿತ್ತು. ಅಂದಿನಿಂದ ಅವರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ.
‘‘ವೈದ್ಯ ಮತ್ತು ಅವರ ಕುಟುಂಬದ ವಿರುದ್ಧ ಮಾಡಲಾಗುತ್ತಿರುವ ಅನ್ಯಾಯ ಮತ್ತು ತೋರಲಾಗುತ್ತಿರುವ ಅಮಾನವೀಯ ವರ್ತನೆಯ ವಿರುದ್ಧ ಪ್ರತಿಭಟಿಸುವುದಕ್ಕಾಗಿ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ’’ ಎಂದು ವೈದ್ಯರ ಸಹೋದರ ಜಮೀಲ್ ಅಫ್ರಿದಿ ಹೇಳಿದರು.
ಪಂಜಾಬ್ ರಾಜ್ಯದ ಜೈಲಿನಲ್ಲಿರುವ ವೈದ್ಯ ಶಕೀಲ್ ಅಫ್ರಿದಿಯನ್ನು ಭೇಟಿಯಾದ ಬಳಿಕ ಅವರು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.
ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದನ್ನು ಅವರ ವಕೀಲ ಕಮರ್ ನದೀಮ್ ಕೂಡ ಖಚಿತಪಡಿಸಿದ್ದಾರೆ.
ಶಕೀಲ್ ಅಫ್ರಿದಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ 2012 ಮೇ ತಿಂಗಳಲ್ಲಿ ಅವರಿಗೆ 33 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಈ ಆರೋಪವನ್ನು ಅವರು ನಿರಾಕರಿಸುತ್ತಾ ಬಂದಿದ್ದಾರೆ. ಬಳಿಕ ಅವರ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಲಾಗಿದೆ.







