ಕೊರೋನಾ ವೈರಸ್: ಜಪಾನಿನಲ್ಲಿದ್ದ ಕಾರವಾರದ ಅಭಿಷೇಕ್ ಆರೋಗ್ಯದ ಬಗ್ಗೆ ವೈದ್ಯರ ಮಾಹಿತಿ

ಕಾರವಾರ, ಮಾ.2: ಕಳೆದ ಕೆಲವು ದಿನಗಳಿಂದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಕೊರೋನಾ (ಕೋವಿಡ್) ವೈರಸ್ ಭೀತಿಯಿಂದ ಜಪಾನಿನಲ್ಲಿ ಸಿಲುಕಿಕೊಂಡಿದ್ದ ಕಾರವಾರದ ಅಭಿಷೇಕ್ ಈಗಾಗಲೇ ಸ್ವದೇಶಕ್ಕೆ ಮರಳಿದ್ದು, ಹರಿಯಾಣದಲ್ಲಿ ನಡೆದ ಆರೋಗ್ಯ ಪರೀಕ್ಷೆಯಲ್ಲಿ ಅಭಿಷೇಕ್ ಅವರಿಗೆ ವೈರಸ್ ಭೀತಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಬರ್ಮುಡಾದ ಕ್ರೂಸ್‍ನಲ್ಲಿ ಉದ್ಯೋಗಿಯಾಗಿರುವ ಅಭಿಷೇಕ್ ಹಾಂಕಾಂಗ್‍ನಿಂದ ಜಪಾನಿನ ಟೋಕಿಯೋಗೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಕ್ರೂಸ್‍ನಲ್ಲಿ ಕೊರೋನಾ ಪೀಡಿತರಿದ್ದ ಕಾರಣ ಜಪಾನ್ ಅಧಿಕಾರಿಗಳು ಸಮುದ್ರದಲ್ಲೇ ಹಡಗನ್ನು ತಡೆ ಹಿಡಿದಿದ್ದರು.
ಭಾರತದ 100 ಮಂದಿ ಸೇರಿದಂತೆ ಹಲವು ದೇಶಗಳ 2,666 ಪ್ರವಾಸಿಗರು ಹಡಗಿನಲ್ಲಿದ್ದರು. ಅವರಲ್ಲಿ 50ಕ್ಕೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ತಮ್ಮನ್ನು ರಕ್ಷಿಸುವಂತೆ ಭಾರತೀಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಬಳಿಕ ವಿದೇಶಾಂಗ ಸಚಿವಾಲಯ ಹಡಗಿನಲ್ಲಿದ್ದ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆದುಕೊಂಡು ಬಂದು ಎಲ್ಲರನ್ನು 14 ದಿನಗಳ ವಿಶೇಷ ಆರೋಗ್ಯ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆ ನಂತರ ಮನೆಗೆ ಮರಳಲು ಅವಕಾಶ ನೀಡಲಾಗುವುದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾಗಿ ಅಭಿಷೇಕ್ ಅವರ ಪಾಲಕರು ಮಾಹಿತಿ ನೀಡಿದ್ದಾರೆ.







