ರಾಯಚೂರು ವಿವಿ ಸ್ಥಾಪನೆಗೆ ವಿಧೇಯಕ ಮಂಡನೆ

ಬೆಂಗಳೂರು, ಮಾ.2: ಪ್ರತ್ಯೇಕ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.
ವಿಧಾನಸೌಧದ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದ ವಿಧೇಯಕದಲ್ಲಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿರುವ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಂಯೋಜನೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಹಿಂಪಡೆದು ಸರಕಾರ ಸೂಚಿಸಿದ ದಿನಾಂಕದಿಂದ ರಾಯಚೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿರುವ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಸಂಯೋಜನೆ ಹಿಂಪಡೆದು, ರಾಯಚೂರು ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರವು ಪ್ರಥಮ ಕುಲಪತಿ ನೇಮಕ ಮಾಡಬೇಕು. ಪ್ರಥಮ ಕುಲಪತಿಯನ್ನು ನೇಮಿಸುವವರೆಗೆ ರಾಯಚೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಕೈಗೊಳ್ಳುವ ಕ್ರಮಗಳ ಉದ್ದೇಶಕ್ಕಾಗಿ ರಾಜ್ಯ ಸರಕಾರವು ನೇಮಿಸಿದ ವಿಶೇಷಾಧಿಕಾರಿಯು ಕುಲಪತಿಗಳ ಅಧಿಕಾರ ಚಲಾಯಿಸಬಹುದು.
ಪ್ರಥಮ ಕುಲಪತಿಯು ತಿದ್ದುಪಡಿ ವಿಧೇಯಕ ಜಾರಿಯಾದ ದಿನದಿಂದ ಆರು ತಿಂಗಳ ಒಳಗಾಗಿ ಅಥವಾ ಕುಲಾಧಿಪತಿಯು (ರಾಜ್ಯಪಾಲ) ಸೂಚಿಸಿದ ದಿನಾಂಕದ (1 ವರ್ಷ) ಒಳಗಾಗಿ ನೇಮಕ ಮಾಡಬೇಕು. ಜತೆಗೆ, ರಾಯಚೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ತು ಹಾಗೂ ಇತರೆ ಪ್ರಾಧಿಕಾರ ರಚಿಸಲು ವ್ಯವಸ್ಥೆಗೆ ಮಾಡಲು ಪ್ರಥಮ ಕುಲಪತಿಯೇ ಕ್ರಮ ಕೈಗೊಳ್ಳಬೇಕು ಎಂದು ತಿದ್ದುಪಡಿ ವಿಧೇಯಕದಲ್ಲಿ ಹೇಳಲಾಗಿದೆ.







