ಬಾಂಗ್ಲಾ ಸ್ಪೀಕರ್ ಭಾರತ ಪ್ರವಾಸ ರದ್ದು: ಸಿಎಎ ವಿರೋಧಿ ಪ್ರತಿಭಟನೆ ಕಾರಣ?

ಢಾಕಾ,ಮಾ.2: ಬಾಂಗ್ಲಾದೇಶ ಸಂಸತ್‌ನ ಸ್ಪೀಕರ್ ಡಾ. ಶಿರಿನ್ ( ಶರ್ಮಿನ್ ಚೌಧುರಿ) ಅವರು ತಮ್ಮ ಹೊಸದಿಲ್ಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಭಾರತದ ವಿವಿಧೆಡೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವುದು ಶಿರಿನ್ ಅವರು ತನ್ನ ಹೊಸದಿಲ್ಲಿ ಭೇಟಿಯನ್ನು ಹಠಾತ್ ರದ್ದುಪಡಿಸಿರುವುದಕ್ಕೆ ಕಾರಣವಿರಬಹುದೆಂದು ಕೆಲವು ಮಾಧ್ಯಮಗಳು ಸಂದೇಹ ವ್ಯಕ್ತಪಡಿಸಿವೆ.
‘‘ ಲೋಕಸಭೆಯ ಆಹ್ವಾನದ ಮೇರೆಗೆ ಡಾ. ಶಿರಿನ್ ಚೌಧುರಿ ನೇತೃತ್ವದ 18 ಸದಸ್ಯರ ಬಾಂಗ್ಲಾ ನಿಯೋಗವು ಭಾರತಕ್ಕೆ ಭೇಟಿ ನೀಡುವುದರಲ್ಲಿತ್ತು. ಆದರೆ ಆ ಪ್ರವಾಸವನ್ನು ರದ್ದುಪಡಿಸಲಾಗಿದೆ’’ಎಂದು ಬಾಂಗ್ಲಾ ಸಂಸತ್‌ನ ಮುಖ್ಯ ಸಚೇತಕ ನೂರೆ ಅಲಾಂ ಢಾಕಾ ಟ್ರಿಬ್ಯೂನ್ ಪತ್ರಿಕೆಗೆ ತಿಳಿಸಿದ್ದಾರೆ.
ಆದಾಗ್ಯೂ ಈಗ ಭಾರತದ ವಿವಿಧೆಡೆ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಗೂ, ಬಾಂಗ್ಲಾ ನಿಯೋಗದ ಹೊಸದಿಲ್ಲಿ ಭೇಟಿ ರದ್ದತಿಗೂ ನಂಟು ಕಲ್ಪಿಸಲು ಲಿಟೊನ್ ಅವರು ನಿರಾಕರಿಸಿದ್ದಾರೆ.
‘‘ಬಾಂಗ್ಲಾದ ಪ್ರಪ್ರಥಮ ಅಧ್ಯಕ್ಷ ಶೇಖ್ ಮುಝಿಬುರ್ ರಹ್ಮಾನ್ ಅವರ ಜನ್ಮಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮಾರ್ಚ್ 22-23ರಂದು ನಡೆಯಲಿರುವ ಜಾತೀಯ ಸಂಸದ್ (ಬಾಂಗ್ಲಾ ಸಂಸತ್)ನ ವಿಶೇಷ ಅಧಿವೇಶನ ನಡೆಯಲಿದೆ. ಈ ವಿಶೇಷ ಸಂಸತ್ ಅಧಿವೇಶನಕ್ಕಾಗಿ ನಾವು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸ್ಪೀಕರ್ ನೇತೃತ್ವದ ನಿಯೋಗವು ಭಾರತ ಪ್ರವಾಸವನ್ನು ಕೈಗೊಳ್ಳುತ್ತಿಲ್ಲ’’ ಎಂದು ಲಿಟೊನ್ ತಿಳಿಸಿದರು.
ಬಾಂಗ್ಲಾ ಸಂಸತ್‌ನ ವಿಶೇಷ ಅಧಿವೇಶನವು ಮುಗಿದ ಬಳಿಕ ನಿಯೋಗವು ಭಾರತಕ್ಕೆ ಭೇಟಿ ನೀಡಲಿದೆಯೆಂದು ಅವರು ತಿಳಿಸಿರು. ಈ ನಿಯೋಗದಲ್ಲಿ ಸ್ಪೀಕರ್, ಮುಖ್ಯ ಸಚೇತಕ, ಸಂಸತ್ ಕಾರ್ಯಾಲಯದ ಕಾರ್ಯದರ್ಶಿ ಹಾಗೂ ಸರಕಾರದ ಇತರ ಉನ್ನತ ಅಧಿಕಾರಿಲಿಗಳಿರುವರು ಎಂದು ಅವರು ಹೇಳಿದ್ದಾರೆ.







