ಉಡುಪಿ: 6ರಂದು ಶ್ರೀಶಾರದಾ ದೇವಿಗೆ ಕುಂಭಾಭಿಷೇಕ
ಉಡುಪಿ, ಮಾ.2: ಶ್ರೀಶೃಂಗೇರಿ ಶಾರದಾ ಪೀಠದ ಕಿರಿಯ ಯತಿಗಳಾದ ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿ ಅವರ ಉಪಸ್ಥಿತಿಯಲ್ಲಿ ಇಲ್ಲಿನ ಕುಂಜಿಬೆಟ್ಟಿನ ಶಾರದಾನಗರದಲ್ಲಿರುವ ಶ್ರೀಶಾರದಾ ದೇವಸ್ಥಾನದ ಶ್ರೀಶಾರದಾ ದೇವಿ, ಮಹಾಗಣಪತಿ ಹಾಗೂ ಆದಿಶಂಕರಾಚಾರ್ಯರಿಗೆ ಕುಂಭಾಭಿಷೇಕವು ಮಾ.6ರ ಶುಕ್ರವಾರ ಬೆಳಗ್ಗೆ ನಡೆಯಲಿದೆ ಎಂದು ಉಡುಪಿ ಶ್ರೀಸ್ಥಾನಿಕ ಬ್ರಾಹ್ಮಣ ಸಂಘದ ಪ್ರಚಾರ ಸಮಿತಿಯ ವಿಶ್ವನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇವಸ್ಥಾನವು 1984ರಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಅಂದಿನ ಜಗದ್ಗುರುಗಳಾದ ಶ್ರೀಅಭಿನವವಿದ್ಯಾತೀರ್ಥ ಮಹಾಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡಿತ್ತು. ಬಳಿಕ ಶ್ರೀಭಾರತೀತೀರ್ಥ ಮಹಾಸ್ವಾಮಿಗಳು 2004ರಲ್ಲಿ ಇದರ ಪುನ:ಪ್ರತಿಷ್ಠೆ ನೆರವೇರಿಸಿದ್ದರು ಎಂದರು.
ಇದೀಗ ಶ್ರೀಶಾರದಾ ದೇವಿ, ಮಹಾಗಣಪತಿ ಹಾಗೂ ಆದಿಶಂಕರಾಚಾರ್ಯರಿಗೆ ಕುಂಭಾಭಿಷೇಕವು ಮಾ.6ರ ಬೆಳಗ್ಗೆ 8:30ರಿಂದ 9:30ರವರೆಗೆ ನಡೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು ಮಾ.5ರ ಸಂಜೆ 6ಕ್ಕೆ ಮೊದಲ ಬಾರಿಗೆ ಉಡುಪಿಗೆ ಆಗಮಿಸಲಿದ್ದು, ಅವರನ್ನು ಕಲ್ಸಂಕದಿಂದ ಅದ್ದೂರಿಯ ಮೆರವಣಿಗೆಯಲ್ಲಿ ಶಾರದಾ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು ಎಂದರು.
ಮರುದಿನ ಮುಂಜಾನೆ 6:30ಕ್ಕೆ ಧಾರ್ಮಿಕ ವಿಧಿವಿದಾನಗಳು ಆರಂಭ ಗೊಳ್ಳಲಿದ್ದು, ಕುಂಭಾಭಿಷೇಕದ ಬಳಿಕ ಬೆಳಗ್ಗೆ 10ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಅಪರಾಹ್ನ 12:30ಕ್ಕೆ ಮಹಾಪೂಜೆ ಹಾಗೂ 1ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಕಾರ್ಯದರ್ಶಿ ಅರವಿಂದ ಕುಮಾರ್, ಸಂಚಾಲಕ ಯು. ಪ್ರಫುಲ್ಲಚಂದ್ರ ರಾವ್ ಉಪಸ್ಥಿತರಿದ್ದರು.







