ಐದಾರು ಇಲಾಖೆಗಳು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ: ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾ. 2: ಬೆಳಗಾವಿಯ ಸುವರ್ಣ ವಿಧಾನಸೌಧ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮತ್ತು ಜನರ ಹತ್ತಿರಕ್ಕೆ ಅಧಿಕಾರ ತೆಗೆದುಕೊಂಡು ಹೋಗುವ ದೃಷ್ಟಿಯಿಂದ ಐದಾರು ಇಲಾಖೆಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಫೆ.17ರಂದು ರಾಜ್ಯಪಾಲರು ಮಾಡಿದ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆಗೆ ವಿಪಕ್ಷಗಳ ಧರಣಿ ಸತ್ಯಾಗ್ರಹ, ಗದ್ದಲದ ಮಧ್ಯೆ ಉತ್ತರ ನೀಡಿದ ಅವರು, ಬಿಜೆಪಿ ಸರಕಾರ ಅಧಿಕಾರ ಹಿಡಿದು ಏಳು ತಿಂಗಳಾಗಿದೆ. ದಿಟ್ಟವಾಗಿ ಹಲವು ಸವಾಲುಗಳನ್ನು ಎದುರಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ದೃಢವಾಗಿ ಪ್ರಯತ್ನಿಸುತ್ತಿದೆ ಎಂದರು.
ಗಡಿ ರಕ್ಷಣೆ: ಗಡಿ ವಿಚಾರದಲ್ಲಿ ನೆರೆ ರಾಜ್ಯ ಮಹಾರಾಷ್ಟ್ರ ಸರಕಾರ ಕ್ಯಾತೆ ತೆಗೆಯುತ್ತಿದ್ದು, ಗಡಿ ವಿಚಾರದಲ್ಲಿ ಸರಕಾರದ ನಿಲುವು ಸ್ಪಷ್ಟ. ಮಹಾಜನ್ ವರದಿಯೇ ಅಂತಿಮ. ಯಾವುದೇ ಕಾರಣಕ್ಕೂ ನಾಡಿನ ಒಂದಿಂಚು ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಔದ್ಯೋಗಿಕ ಅಭಿವೃದ್ಧಿ ಕುಂಠಿತ: ಕೆಲ ವರ್ಷಗಳಿಂದ ರಾಜ್ಯದಲ್ಲಿ ಔದ್ಯೋಗಿಕ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಉದ್ಯೋಗ ಸೃಷ್ಟಿಸಿಯೂ ಕುಂಠಿತಗೊಂಡಿದೆ. ಆದರೆ, ನಮ್ಮ ಸರಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್‌ನಲ್ಲಿ ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಲಿದೆ ಎಂದು ಪ್ರಕಟಿಸಿದರು.
ಫಲಪ್ರದ: ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶ ಉತ್ತರ ಕರ್ನಾಟಕದಲ್ಲಿ 70ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವಂತೆ ಮಾಡಿದೆ. ದಾವೋಸ್ ಭೇಟಿಯೂ ಫಲಪ್ರದವಾಗಿದೆ. ಕೆಲವು ತಿಂಗಳಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರು ಬರಲಿದ್ದಾರೆ ಎಂದು ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು.
ಅನುದಾನ ತಡೆ ಅನಿವಾರ್ಯ
ಕೆಲವು ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದಿದ್ದಾರೆಂಬ ನಿಲುವು ತಳೆದಿದ್ದಾರೆ. ಆದರೆ, ಹಣಕಾಸಿನ ಶಿಸ್ತನ್ನು ಪಾಲಿಸಲು ಈ ರೀತಿಯ ಕಾರ್ಯ ಅನಿವಾರ್ಯ. ಹಂತ-ಹಂತವಾಗಿ ಅಭಿವೃದ್ಧಿ ತಡೆ ಹಿಡಿದ ಕಾರ್ಯಗಳನ್ನು ಮುಂದುವರಿಸಲಾಗುವುದು’
-ಯಡಿಯೂರಪ್ಪ, ಮುಖ್ಯಮಂತ್ರಿ







