ಮಾ. 8ರಂದು ಜಪ್ಪಿನಮೊಗರಿನಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶ
ಉಳ್ಳಾಲ: ಪೌರ ಸಮನ್ವಯ ಸಮಿತಿ ದಕ್ಷಿಣ ಕನ್ನಡ ಆಶ್ರಯದಲ್ಲಿ ಬೃಹತ್ ಪೌರತ್ವ ಸಂರಕ್ಷಣಾ ಸಮಾವೇಶವು ಮಾ.8ರಂದು ಜಪ್ಪಿನಮೊಗರು ಮೈದಾನದಲ್ಲಿ ನಡೆಯಲಿದ್ದು, ರಾಷ್ಟ್ರ, ರಾಜ್ಯಮಟ್ಟದ ನಾಯಕರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಪೌರ ಸಮನ್ವಯ ಸಮಿತಿ ಅಧ್ಯಕ್ಷ ಯು.ಕೆ. ಯೂಸುಫ್ ಹೇಳಿದರು.
ತೊಕ್ಕೊಟ್ಟಿನ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ವಿರೋಧಿ ಮಸೂದೆ ಹಾಗೂ ದೆಹಲಿಯಲ್ಲಿ ನಡೆದ ಹತ್ಯಾ ಪ್ರಕರಣ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಧರ್ಮ ಧರ್ಮಗಳ ನಡುವೆ ಕಂದಕ ಉಂಟುಮಾಡುವ, ಸಾಮರಸ್ಯ ಕದಡುವ ದುಷ್ಟ ಶಕ್ತಿಗಳನ್ನು ದಮನಿಸಬೇಕು. ಕೇಂದ್ರ ಸರಕಾರ ಸಿಎಎ ಕಾನೂನು ವಾಪಾಸು ಪಡೆಯಬೇಕು. ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣಕರ್ತರಾದವರಿಗೆ ಶಿಕ್ಷೆ ಕೊಡಬೇಕು. ಎಲ್ಲ ಧರ್ಮದ ಸಂತ್ರಸ್ತರಿಗೆ ತಾರತಮ್ಯ ಮಾಡದೆ ಪರಿಹಾರ ಕೊಡಬೇಕು ಎಂದರು.
ಜೆಡಿಎಸ್ ಹಿರಿಯ ಮುಖಂಡ ನಝೀರ್ ಉಳ್ಳಾಲ ಮಾತನಾಡಿ ಕಾರ್ಯಕ್ರಮದಲ್ಲಿ ಭಾಷಣಕರರಾಗಿ ಭಾರತದ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಸಮಸ್ತ ಕೇರಳ ಸುನ್ನಿ ಮುಖಂಡ ಸಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಪಾನಕ್ಕಾಡ್, ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಆರ್ಯ ಸಮಾಜ ಮುಖಂಡ ಸ್ವಾಮಿ ಅಗ್ನಿವೇಶ್ ದೆಹಲಿ, ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಕೈವಾಲ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಪಿಎಫ್‍ಐ ರಾಜ್ಯಾಧ್ಯಕ್ಷ ಯಾಸೀರ್ ಹಸನ್, ಜಮಾಅತೇ ಇಸ್ಲಾಮೀ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯು. ಕೆ. ಮೊಹಮ್ಮದ್ ಮುಸ್ತಫ, ಯು. ಎಚ್. ಫಾರೂಕ್, ಅಬ್ದುಲ್ ಜಬ್ಬಾರ್, ನಝೀರ್ ಉಳ್ಳಾಲ, ಮುನೀರ್ ಸಖಾಫಿ, ಎಂ. ಜಿ. ಮಹಮ್ಮದ್, ಅಶ್ರಫ್ ಬಾವ, ಅಬ್ಬಾಸ್, ಉಳ್ಳಾಲ ನಗರಸಭೆಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್, ಕುಬೈಬ್ ತಂಙಳ್, ಝೈನ್ ಸಖಾಫಿ, ಪತ್ರಕರ್ತ ಅಕ್ರಂ ಹಸನ್ ಉಪಸ್ಥಿತರಿದ್ದರು.







