ದೆಹಲಿ ಹಿಂಸಾಚಾರ : ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ

ಪುತ್ತೂರು: ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆ ದೇಶವೇ ತಲೆತಗ್ಗಿಸುವ ವಿಚಾರವಾಗಿದ್ದು, ತಲೆ ಬುಡವಿಲ್ಲದ ಅರ್ಥವಿಲ್ಲದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕೋಮುವಾದಿ ಶಕ್ತಿಗಳು ಮಾಡು ತ್ತಿವೆ. ಸಂವಿಧಾನ ಉಳಿಸಿಕೊಳ್ಳಲು ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಹೇಳಿದರು.
ಅವರು ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ ಮುಂಬಾಗದಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಿಎಫ್‍ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಅವರು ಮಾತನಾಡಿ, ದೇಶದಲ್ಲಿ ಸಂಘ ಪರಿವಾರದಿಂದ ಜನರ ನಡುವೆ ಧ್ವೇಷ ಹರಡುವ ಕಾರ್ಯ ನಡೆಯುತ್ತಿದ್ದು ಅದನ್ನು ನಾವು ತಡೆಯುವ ಕೆಲಸ ಮಾಡಬೇಕಾಗಿದೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸಬೇಕಾಗಿದೆ ಎಂದರು.
ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ, ಬಪ್ಪಳಿಗೆ ಮಸೀದಿಯ ಖತೀಬ್ ಅಬ್ದುಲ್ ನಹೀಂ ಫೈಝಿ ಮಾತನಾಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ರಝಾಕ್ ಹಾಜಿ, ಬನ್ನೂರು ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಮಲ್ಲಿ ಸಖಾಫಿ, ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಕೆ.ಎಚ್.ಖಾಸಿಂ ಹಾಜಿ, ಇಬ್ರಾಹಿಂ ಹಾಜಿ ಸಾಗರ್, ಬಶೀರ್ ಕೂರ್ನಡ್ಕ, ಶಕೂರ್ ಹಾಜಿ, ಕೆ.ಎ.ಸಿದ್ದೀಕ್, ಅಬ್ದುಲ್ ಹಮೀದ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.







